ಬೆಳಗಾವಿ: ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ (ಬಿಡಿಸಿಸಿ) ನಿರ್ದೇಶಕರ ಚುನಾವಣೆಯಲ್ಲಿ ಅಂಜಲಿ ನಿಂಬಾಳ್ಕರ್ ಹಾಗೂ ಅರವಿಂದ ಪಾಟೀಲ್ ಮಧ್ಯೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿರುವುದರಿಂದ ಜಿಲ್ಲೆಯಲ್ಲಿ ಮತ್ತೊಮ್ಮೆ ರೆಸಾರ್ಟ್ ರಾಜಕಾರಣ ಶುರುವಾದಂತಾಗಿದೆ.
ಮೂರು ನಿರ್ದೇಶಕ ಸ್ಥಾನಗಳ ಪೈಕಿ ಖಾನಾಪುರ ಕ್ಷೇತ್ರದ ಚುನಾವಣೆ ಮಾತ್ರ ಪ್ರತಿಷ್ಠೆಯ ಕಣವಾಗಿದೆ. ಹೀಗಾಗಿ ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಬಣಗಳು ತಮ್ಮ ಮತದಾರ ಬೆಂಬಲಿಗರನ್ನು ರೆಸಾರ್ಟ್ನಲ್ಲಿ ಇರಿಸಿದ್ದಾರೆ ಎನ್ನಲಾಗುತ್ತಿದೆ. ಆದ್ರೆ, ಜಿಲ್ಲೆಯಲ್ಲಿ ಬದ್ಧ ವೈರಿಗಳಂತೆ ಇದ್ದ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಬಾಲಚಂದ್ರ ಜಾರಕಿಹೊಳಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರ ಸ್ಥಾನಗಳ ಅವಿರೋಧ ಆಯ್ಕೆಗೆ ಪ್ರಯತ್ನಿಸಿದರು. ಇದಾದ ನಂತರ ಅಖಾಡಕ್ಕೆ ಧುಮಿಕ್ಕಿದ್ದ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಶಾಸಕಿ ಅಂಜಲಿ ನಿಂಬಾಳ್ಕರ್ ಮನವೊಲಿಸಿ ಅವಿರೋಧ ಆಯ್ಕೆಗೆ ಪ್ರಯತ್ನಿಸಿದರು. ಆದರೆ, ಕಣದಿಂದ ಹಿಂದೆ ಸರಿಯಲು ಹಿಂದೇಟು ಹಾಕಿದ ಶಾಸಕಿ ಚುನಾವಣೆ ಎದುರಿಸುವುದಾಗಿ ಘೋಷಿಸಿದ್ದರು. ಇನ್ನು ಅವಿರೋಧ ಆಯ್ಕೆಗೆ ಅಡ್ಡಗಾಲಾದ ಖಾನಾಪುರ ಕ್ಷೇತ್ರದ ಶಾಸಕಿ ಅಂಜಲಿ ನಿಂಬಾಳ್ಕರ್ ಅವರನ್ನು ಸೋಲಿಸಲು ಎಂಇಎಸ್ ಬೆಂಬಲಿತ ಅಭ್ಯರ್ಥಿ ಮಾಜಿ ಶಾಸಕ ಅರವಿಂದ ಪಾಟೀಲಗೆ ಬಿಜೆಪಿ ಬೆಂಬಲ ಸೂಚಿಸಿದೆ.
ಖಾನಪೂರ ಕ್ಷೇತ್ರವನ್ನು ಗೆಲ್ಲಲೇಬೇಕೆಂಬ ಪಣತೊಟ್ಟಿರುವ ಬಿಜೆಪಿಗೆ ಎಲ್ಲ ರೀತಿಯಿಂದಲೂ ಶಾಸಕಿ ಅಂಜಲಿ ನಿಂಬಾಳ್ಕರ್ ಸೆಡ್ಡು ಹೊಡಿದ್ದಾರೆ. ಈಗಾಗಲೇ ತನ್ನ ಗೆಲುವಿಗೆ ಬೇಕಾದ 28 ಮತದಾರರನ್ನು ಮಹಾರಾಷ್ಟ್ರ ರೆಸಾರ್ಟ್ವೊಂದರಲ್ಲಿ ಬಚ್ಚಿಟ್ಟಿದ್ದಾರೆ. 22 ಮತದಾರರನ್ನು ಮಾಜಿ ಶಾಸಕ ಅರವಿಂದ ಪಾಟೀಲ ಇರಿಸಿದ್ದಾರೆ. ಇದರಿಂದಾಗಿ ಖಾನಾಪುರ ಕೃಷಿ ಪತ್ತಿನ ಸಹಕಾರ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಎಂಇಎಸ್ ಬೆಂಬಲಿತ ಹಾಗೂ ಎಂಇಎಸ್ ಬೆಂಬಲಿತ, ಮಾಜಿ ಶಾಸಕ ಅರವಿಂದ ಪಾಟೀಲ್ ಮಧ್ಯೆ ಬಿಗ್ ಫೈಟ್ ನಡೆಯುತ್ತಿದೆ.
ಇನ್ನು 50 ಪಿಕೆಪಿಎಸ್ ಸೊಸೈಟಿಗಳ ಪ್ರತಿನಿಧಿಗಳು ವೋಟಿಂಗ್ ಮಾಡಲಿದ್ದಾರೆ. ಆದರೆ, ಬಿಜೆಪಿಗೆ ಸೆಡ್ಡು ಹೊಡೆದಿರೋ ಶಾಸಕಿ ಅಂಜಲಿ ನಿಂಬಾಳ್ಕರ್ 50ರ ಪೈಕಿ 28 ಮತದಾರರನ್ನು ತನ್ನತ್ತ ಸೆಳೆದು ಮಹಾರಾಷ್ಟ್ರದ ರೆಸಾರ್ಟ್ವೊಂದರಲ್ಲಿ ಇಟ್ಟಿದ್ದಾರೆ ಎನ್ನಲಾಗ್ತಿದೆ. ಮಾಜಿ ಶಾಸಕ ಅರವಿಂದ ಪಾಟೀಲ ಕೂಡ 22 ಮತದಾರರನ್ನು ರಹಸ್ಯ ಸ್ಥಳದಲ್ಲಿಟ್ಟಿದ್ದಾರೆ. 16 ನಿರ್ದೇಶಕ ಬಲದ ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಈಗಾಗಲೇ 13 ಜನ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಖಾನಾಪೂರ ಕ್ಷೇತ್ರದ ನಿರ್ದೇಶಕ ಸ್ಥಾನಕ್ಕೆ ಎರಡು ಪಕ್ಷಗಳು ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಹಿನ್ನೆಲೆ ತಮ್ಮ ಬೆಂಬಲಿತವಾಗಿ ಪಿಕೆಪಿಎಸ್ ಪ್ರತಿನಿಧಿಸುವ ಮತದಾರರನ್ನು ಎರಡು ಪಕ್ಷದ ಅಭ್ಯರ್ಥಿಗಳು ಮಹಾರಾಷ್ಟ್ರದ ರೆಸಾರ್ಟ್ ನಲ್ಲಿ ಇಟ್ಟಿದ್ದಾರೆ. ಆ ಪೈಕಿ ಮಾಜಿ ಶಾಸಕ ಅರವಿಂದ್ ಪಾಟೀಲ್ ತನ್ನ ಬೆಂಬಲಿತ ಸದಸ್ಯರನ್ನು ಮಹಾರಾಷ್ಟ್ರದ ಸಾವಂತವಾಡಿಯ ಮಾಲ್ವಾನ್ನಲ್ಲಿರುವ ಬೀಚ್ನ ರೆಸಾರ್ಟ್ನಲ್ಲಿ ಇರಿಸಿದ್ದು, ಶಾಸಕಿ ಅಂಜಲಿ ನಿಂಬಾಳ್ಕರ್ ಬೆಂಬಲಿತ ಸದಸ್ಯರು ಪುಣೆಯ ಆ್ಯಂಬಿವ್ಯಾಲಿ ರೆಸಾರ್ಟ್‌ನಲ್ಲಿರುವ ವಾಸ್ತವ್ಯ ಹೂಡಿದ್ದಾರೆ.
ಖಾನಾಪುರ, ರಾಮದುರ್ಗ ಕೃಷಿ ಪತ್ತಿನ ಸಹಕಾರ ಸಂಘ ಹಾಗೂ ನೇಕಾರ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ನ. 6ರಂದು ಮೂರು ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಈ ಪ್ರತಿಷ್ಠೆಯ ಚುನಾವಣೆಯಲ್ಲಿ ಯಾರು ಜಯಗಳಿಸುತ್ತಾರೆ ಎಂಬುವುದನ್ನು ಕಾದು ನೋಡಬೇಕಿದೆ.