ಬೆಳಗಾವಿ : ವಿಧಾನಸಭೆಯಲ್ಲಿ ರಾಜ್ಯದ ನಾಲ್ಕು ಏರ್ಪೋರ್ಟ್ಗಳಿಗೆ ನಾಮಕರಣ ಮಾಡುವ ನಿರ್ಣಯ ಅಂಗೀಕಾರ ಪಡೆದುಕೊಳ್ಳಲಾಯಿತು.
ಈ ಸಂಬಂಧ ಮೂಲ ಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ಎಂ.ಬಿ ಪಾಟೀಲ್, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ನಿರ್ಣಯ ಮಂಡಿಸಿದರು.
ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗಜ್ಯೋತಿ ಬಸವೇಶ್ವರ ಹೆಸರು, ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪು ಹೆಸರು, ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿತ್ತೂರು ರಾಣಿ ಚೆನ್ನಮ್ಮ, ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹೆಸರಿಡುವ ನಿರ್ಣಯವನ್ನು ಅಂಗೀಕರಿಸಲಾಯಿತು. ಇತ್ತ ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಸುಲ್ತಾನ್ ಹೆಸರು ಇಡಿ ಎಂದು ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಆಗ್ರಹಿಸಿದರು. ಅಬ್ಬಯ್ಯ ಒತ್ತಾಯಕ್ಕೆ ಬಿಜೆಪಿ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಈ ವೇಳೆ ಸದನದಲ್ಲಿ ಗದ್ದಲ ಕೋಲಾಹಲ ಏರ್ಪಟ್ಟಿತು.
ನೆಹರೂ ಭಾವಚಿತ್ರ ಹಾಕಲು ಆಗ್ರಹ : ವಿಧಾನಸಭೆ ಸಭಾಂಗಣದಲ್ಲಿ ನೆಹರೂ ಭಾವಚಿತ್ರ ಹಾಕುವಂತೆ ಕಾಂಗ್ರೆಸ್ ಶಾಸಕ ಡಾ.ರಂಗನಾಥ್ ಒತ್ತಾಯಿಸಿದರು. ನೆಹರೂ ಭಾವಚಿತ್ರ ವಿಚಾರದಲ್ಲಿ ಬಹಳಷ್ಟು ಶಾಸಕರು ನಿಮಗೆ ಮನವಿ ಮಾಡಿದ್ದಾರೆ. ಸದನದಲ್ಲಿ ನೆಹರೂ ಅವರ ಭಾವಚಿತ್ರ ತರಬೇಕಾಗಿ ಕೇಳಿಕೊಳ್ತೇನೆ ಎಂದು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಸ್ಪೀಕರ್, ಸದನದಲ್ಲಿ ಯಾವ್ಯಾವ ಸಂದರ್ಭದಲ್ಲಿ ಏನೇನು ಮಾಡಬೇಕು ಅಂತ ಬಿಎಸಿ ಸಭೆ ನಿರ್ಧರಿಸುತ್ತದೆ. ಏನೇ ಇದ್ದರೂ ನೀವು ಸಿಎಂ ಅವರಿಗೆ ತಿಳಿಸಿ. ಸಿಎಂ ಬಿಎಸಿ ಸಭೆಯಲ್ಲಿ ಚರ್ಚೆ ಮಾಡ್ತಾರೆ ಎಂದರು.
ಬಿಜೆಪಿ ಶಾಸಕನಿಗೆ ಕಾಂಗ್ರೆಸ್ಗೆ ಬರುವಂತೆ ಆಹ್ವಾನ : ಇನ್ನು ವಿಧಾನಸಭೆಯಲ್ಲಿ ಬಿಜೆಪಿ ಶಾಸಕನಿಗೆ ಡಿಸಿಎಂ ಡಿ.ಕೆ ಶಿವಕುಮಾರ್ ಪಕ್ಷಕ್ಕೆ ಬರುವಂತೆ ಬಹಿರಂಗ ಆಹ್ವಾನ ಕೊಟ್ಟರು. ಹರಿಹರ ಬಿಜೆಪಿ ಶಾಸಕ ಬಿ.ಪಿ ಹರೀಶ್, ಕ್ಷೇತ್ರದ ವಿಚಾರವಾಗಿ ವಿಷಯ ಪ್ರಸ್ತಾಪಿಸಿದರು. ಸ್ಥಳೀಯ ನೀರಾವರಿ ವಿಚಾರವಾಗಿ ಪ್ರಸ್ತಾಪಿಸುತ್ತಾ, ನಾವು ಆಡಳಿತಕ್ಕೆ ಬರ್ತೇವೆ ಅಂತ ಜನರು ಆಯ್ಕೆ ಮಾಡಿದ್ದಾರೆ. ಆದರೆ ನಾನು ವಿರೋಧ ಪಕ್ಷದಲ್ಲಿ ಇದ್ದೇನೆ. ಅದರಿಂದ ನಮ್ಮ ಕ್ಷೇತ್ರದ ನೀರಾವರಿ ಯೋಜನೆ ಆಗುವುದು ಅನುಮಾನ ಎಂದರು.
ಇದಕ್ಕೆ ಉತ್ತರಿಸಿದ ಡಿಸಿಎಂ ಡಿ ಕೆ ಶಿವಕುಮಾರ್, ಈ ಕಡೆ ಬರುವುದಾರೆ ನೀವು ಬರಬಹುದು ಎಂದು ಆಹ್ವಾನ ಕೊಟ್ಟರು. ಈ ವೇಳೆ ಸುನೀಲ್ ಕುಮಾರ್ ಮಧ್ಯ ಪ್ರವೇಶಿಸಿ, ಕ್ಷೇತ್ರದ ಅಭಿವೃದ್ಧಿ ಕೇಳಿದ್ರೆ ಪಕ್ಷಾಂತರ ಮಾಡಿ ಅಂತೀರಲ್ಲ. ಇದು ಎಷ್ಟು ಸರಿ ಅಂತ ಆಕ್ಷೇಪಿಸಿದರು. ಈ ವೇಳೆ ಅವರು ಹೇಳಿದ್ದಕ್ಕೆ ನಾನು ಕರೆದಿದ್ದು ಎಂದು ಸ್ಪಷ್ಟಪಡಿಸಿದರು.
ಇದನ್ನೂ ಓದಿ : ಅನುದಾನಿತ ಶಾಲಾ ಕಾಲೇಜು ನೌಕರರಿಗೂ ಜ್ಯೋತಿ ಸಂಜೀವಿನಿ ವಿಸ್ತರಣೆ ಕುರಿತು ಪರಿಶೀಲನೆ: ಸಿಎಂ ಸಿದ್ದರಾಮಯ್ಯ