ಚಿಕ್ಕೋಡಿ: ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಅಧಿಕಾರಿಗಳ ವರ್ಗಾವಣೆ ದಂಧೆ ಆರೋಪ ಮೊದಲಿನಿಂದಲೂ ಇದೆ. ಆದರೆ, ಈ ವರೆಗೆ ಯಾರಿಗೂ ಸಾಬೀತು ಮಾಡಲಿಕ್ಕೆ ಆಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಮಂಗಳವಾರ ಹುಕ್ಕೇರಿ ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮದವರ ಜೊತೆ ಅವರು ಮಾತನಾಡಿದರು. ಸತ್ಯಕ್ಕೆ ದೂರವಾದ ಆರೋಪಗಳು ಕೆಲವರು ಮಾಡುತ್ತಾರೆ. ಆದರೆ ಇದುವರೆಗೂ ಯಾರಿಗೂ ಸಾಬೀತು ಮಾಡಲಿಕ್ಕೆ ಆಗಿಲ್ಲ. ಅವೆಲ್ಲ ಆರೋಪಗಳಷ್ಟೇ, ಏನೇ ಬಂದರೂ ನಮ್ಮ ಸರ್ಕಾರ ಅಭಿವೃದ್ಧಿ ಕಡೆಗೆ ಗಮನ ಕೊಟ್ಟಿದೆ. ನುಡಿದಂತೆ ಅಭಿವೃದ್ಧಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಡಿಸಿಎಂ ಡಿ ಕೆ ಶಿವಕುಮಾರ್ ಅವರ ಸಿಬಿಐ ತನಿಖೆ ಹಿಂಪಡೆಯಲು ಸರ್ಕಾರ ನಿರ್ಧರಿಸಿದ ಕ್ರಮ ಪ್ರಶ್ನಿಸಿ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೈಕೋರ್ಟ್ ಮೆಟ್ಟಿಲೇರಿದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಕೋರ್ಟ್ ಇದೆಯಲ್ಲ, ಕೋರ್ಟ್‌ಗೆ ಹೋದರೆ ನಾವೇನೂ ಹೇಳಕ್ಕಾಗಲ್ಲ. ಕೋರ್ಟ್ ಡಿಸಿಷನ್ ತಗೋಬೇಕು ಅಷ್ಟೇ, ಕೋರ್ಟ್ ತೀರ್ಪು ಅಂತಿಮ. ಕೋರ್ಟ್ ಮೆಟ್ಟಿಲೇರಿದ ಬಗ್ಗೆ ನಾವು ಏನೂ ಹೇಳಲಿಕ್ಕೆ ಆಗುವುದಿಲ್ಲ ಎಂದು ಸಚಿವ ಜಾರಕಿಹೊಳಿ ಪ್ರತಿಕ್ರಿಯಿಸಿದರು.
ಹುಕ್ಕೇರಿ ಪಟ್ಟಣದಲ್ಲಿ ಕೆಡಿಪಿ ಸಭೆ:ಪ್ರತಿ ಮೂರು ತಿಂಗಳಿಗೊಮ್ಮೆ ತಾಲೂಕು ಕೆಡಿಪಿ ಸಭೆ ಮಾಡುತ್ತೇವೆ. ಬರಗಾಲ ಇದ್ದು ಏನೇನು ಕ್ರಮ ಕೈಗೊಳ್ಳಬೇಕು ಎಂಬುದನ್ನು ಅಧಿಕಾರಿಗಳ ಜೊತೆ ಚರ್ಚೆ ಮಾಡಲಾಗಿದೆ. ಈಗಾಗಲೇ ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದು, ಸದ್ಯಕ್ಕೆ ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.
ಜಿಲ್ಲೆಗೆ 22.5 ಕೋಟಿ ಬಿಡುಗಡೆ: ಬರ ನಿರ್ವಹಣೆಗೆ ಬೆಳಗಾವಿ ಜಿಲ್ಲೆಗೆ 22.5 ಕೋಟಿ ರೂ ಬಿಡುಗಡೆ ಆಗಿದೆ. ಅದು ಕೇವಲ ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ವ್ಯವಸ್ಥೆ ಮಾಡಲಾಗಿದೆ. ರೈತರಿಗೆ ಬರಬೇಕಾದ ಪರಿಹಾರ ನೇರವಾಗಿ ಅವರ ಖಾತೆಗೆ ಬರುತ್ತದೆ ಎಂದು ತಿಳಿಸಿದರು.
ಬೆಳೆಹಾನಿ ಸಮೀಕ್ಷೆ 410 ಕೋಟಿ ಪರಿಹಾರ ಬರಬೇಕು: ಬೆಳಗಾವಿ ಜಿಲ್ಲೆಯಲ್ಲಿ ಬೆಳೆಹಾನಿ ಸಮೀಕ್ಷೆ ನಡೆಸಿದ್ದು, 410 ಕೋಟಿ ಪರಿಹಾರ ಬರಬೇಕಾಗಿದೆ. ಆ ಹಣ ಡಿಸಿಯವರ ಖಾತೆಗೆ ಬರುತ್ತೆ ನಂತರ ರೈತರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು ಎಂದು ಹೇಳಿದ ಅವರು, ಬೆಳೆಹಾನಿ ಸಮೀಕ್ಷೆ ನಡೆಸಿ ದೆಹಲಿಗೆ ವರದಿ ಕಳಿಸಲಾಗಿದೆ. ಕೇಂದ್ರದಿಂದ ಹಣ ಬಿಡುಗಡೆ ಆಗುವರೆಗೂ ಏನೂ ಮಾಡುವುದಕ್ಕೆ ಆಗುವುದಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ವಿಚಾರ: ನಿಗಮ ಮಂಡಳಿ ನೇಮಕದ ಬಗ್ಗೆ ಸಿಎಂ, ಡಿಸಿಎಂ ಜಂಟಿಯಾಗಿ ನಿರ್ಧಾರ ಮಾಡುತ್ತಾರೆ. ಹಿರಿಯ ಶಾಸಕರನ್ನು ಆಯ್ಕೆ ಮಾಡುತ್ತೇವೆ ಎಂದು ತಿಳಿಸಿದ್ದು, ನಾವು ಹಿರಿಯ ಶಾಸಕರ ಜೊತೆ ಕಾರ್ಯಕರ್ತರಿಗೂ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಹೇಳಿದ್ದೇವೆ. ಶೇಕಡಾ 50ರಷ್ಟು ಕಾರ್ಯಕರ್ತರಿಗೆ, ಶೇಕಡಾ 50ರಷ್ಟು ಶಾಸಕರಿಗೆ ನೀಡಲು ಮನವಿ ಮಾಡಿದ್ದೇವೆ. ಕಾರ್ಯಕರ್ತರಿಗೆ ಕೊಟ್ಟರೆ ಒಳ್ಳೆಯದು ಎಂದು ಹೇಳಿದರು.
ಇದನ್ನೂಓದಿ:ನಿಗಮ ಮಂಡಳಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನ ನೀಡಿದರೆ ಸರ್ಕಾರದ ವಿರುದ್ಧ ಪಿಐಎಲ್ ಸಲ್ಲಿಕೆ: ಭೀಮಪ್ಪ ಗಡಾದ