ಅಥಣಿ: ತೇಜಸ್ವಿ ಸೂರ್ಯ ಸಂವಿಧಾನ ಸುಟ್ಟು ಹಾಕುವ ಮಾತನಾಡಿದರೆ, ಪ್ರಜ್ಞಾ ಠಾಕೂರ್ ಗಾಂಧಿಯನ್ನ ದೇಶದ್ರೋಹಿ ಅಂತಿದ್ದಾರೆ. ಇಂತಹ ಅಯೋಗ್ಯರು ಡಾ. ಅಂಬೇಡ್ಕರ್ ಬಗ್ಗೆ ಮಾತನಾಡಬಾರದು ಎಂದು ವಿಧಾನ ಪರಿಷತ್ ಸದಸ್ಯ ಆರ್ ಬಿ ತಿಮ್ಮಾಪುರ ಹೇಳಿದ್ದಾರೆ.
ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಬಂದ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ದಲಿತ ಮುಖಂಡರ ಬಗ್ಗೆ, ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್ ಬಗ್ಗೆ ಬಿಜೆಪಿಯವರಿಗೆ ಈಗ ಪ್ರೀತಿ ಹುಟ್ಟಿದೆ. ಅಂಬೇಡ್ಕರ್ ಅಂತ್ಯಕ್ರಿಯೆಗೆ ಕಾಂಗ್ರೆಸ್ ಜಾಗ ಕೊಟ್ಟಿಲ್ಲ ಎಂಬ ಹಸಿ ಸುಳ್ಳನ್ನು ಬಿಜೆಪಿಯವರು ಹೇಳುತ್ತಿದ್ದಾರೆ. ಮನುವಾದಿಗಳ ವಿಚಾರವನ್ನ ಗೋವಿಂದ್ ಕಾರಜೋಳ ಒಪ್ಪಿಕೊಳ್ಳದಿದ್ದರೆ ಪಕ್ಷ ಬಿಟ್ಟು ಹೊರಬರಲಿ ಎಂದರು.
ಶ್ರೀರಾಮುಲು ಅವರನ್ನು ಡಿಸಿಎಂ ಮಾಡ್ತೀನಿ ಎಂದಿದ್ದ ರಾಷ್ಟ್ರೀಯ ಅಧ್ಯಕ್ಷರು ಮಾತು ತಪ್ಪಿದ್ದಾರೆ. ಇದನ್ನೆಲ್ಲ ನೋಡಿದರೆ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಅವರನ್ನು ಬಿಜೆಪಿಯಿಂದ ಕಿತ್ತು ಹಾಕುತ್ತಾರೆ. ಅನರ್ಹರಿಗೆ ಪ್ರವೇಶ ಇಲ್ಲ ಅಂತಾ ಜನ ಬೊರ್ಡ್ ಹಾಕುತ್ತಿದ್ದಾರೆ. ಇದನ್ನ ನೋಡಿದರೆ ಜನತಾ ನ್ಯಾಯಾಲಯದಲ್ಲಿ ಬಿಜೆಪಿ ಸೋಲನ್ನು ಅನುಭವಿಸುತ್ತದೆ ಎಂದರು.