ಬೆಳಗಾವಿ: ನಗರ ಹೊರವಲಯದ ಪೀರನವಾಡಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಮರುಸ್ಥಾಪನೆಗೆ ಆಗ್ರಹಿಸಿ ರಾಯಣ್ಣನ ಅಭಿಮಾನಿಗಳು ಬೆಳಗಾವಿಯ ಸುವರ್ಣ ಸೌಧದಿಂದ ಡಿಸಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಪುಣೆ-ಬೆಂಗಳೂರು ಹೆದ್ದಾರಿಯಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭವಾಗಿದೆ. ರಾಯಣ್ಣ ಪುತ್ಥಳಿ ಮರುಸ್ಥಾಪನೆ ಮಾಡಬೇಕು ಎಂದು ಘೋಷಣೆ ಕೂಗಿ ಸರ್ಕಾರವನ್ನು ರಾಯಣ್ಣ ಅಭಿಮಾನಿಗಳು ಆಗ್ರಹಿಸಿದರು. ರಾಜ್ಯದ ವಿವಿಧ ಭಾಗಗಳಿಂದ ರಾಯಣ್ಣನ ಅಭಿಮಾನಿಗಳು ಹಾಗೂ ಕನ್ನಡ ಸಂಘಟನೆ ಮುಖಂಡರು ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ. ಪ್ರತಿಭಟನೆಯಿಂದ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಇಂದು ಸಭೆ:
ಪುತ್ಥಳಿ ತೆರವು ವಿವಾದ ಇತ್ಯರ್ಥ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ 12.30ಕ್ಕೆ ಸಭೆ ನಡೆಯಲಿದೆ. ಈಗಾಗಲೇ ಪರಿಷತ್ ಸದಸ್ಯ ವಿವೇಕರಾವ್ ಪಾಟೀಲ ನೇತೃತ್ವದ ಹಾಲುಮತ ಸಮಾಜದ ಮುಖಂಡರು ಪ್ರವಾಸಿ ಮಂದಿರಕ್ಕೆ ಆಗಮಿಸಿದ್ದಾರೆ. ಮಧ್ಯಾಹ್ನ 12.30ಕ್ಕೆ ಸಭೆ ನಡೆಯಲಿದೆ.