ಬೆಳಗಾವಿ: ನಿಕಟಪೂರ್ವ ಸ್ಪೀಕರ್ ರಮೇಶ್ ಕುಮಾರ್, ಸಿದ್ದರಾಮಯ್ಯ ಅವರ ಏಜೆಂಟ್‌ರಂತೆ ಕೆಲಸ ಮಾಡಿದ್ದಾರೆ ಎಂದು ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಗೋಕಾಕ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸ್ಪೀಕರ್ ರಮೇಶ್ ಕುಮಾರ್ ತುಘಲಕ್ ರೀತಿಯಲ್ಲಿ ವರ್ತಿಸಿದ್ದಾರೆ. ಅವರ ವಾದದ ಪ್ರಕಾರ ನಾವು ಚುನಾವಣೆಗೆ ನಿಲ್ಲಲು ಸಾಧ್ಯವಿಲ್ಲ. ಫೆಬ್ರವರಿಯಲ್ಲಿ ವಿಪ್ ಕೊಟ್ಟಿದ್ದಕ್ಕೆ ನಾನು ಅಧಿವೇಶನಕ್ಕೆ ಹಾಜರಾಗಿದ್ದೆ. ಆ ವಿಪ್ ಅಂದಿಗೆ ಮುಕ್ತಾಯವಾಗಿದೆ. ಆದ್ರೆ, ವಿಪ್ ಉಲ್ಲಂಘಿಸಿದ್ದಾರೆ ಎಂದು ನಮ್ಮ ನಡೆಯನ್ನೇ ಅವರು ತಿರುಚಿದ್ದಾರೆ. ಪ್ರಧಾನಿ ಮೋದಿಯಿದ್ದ ಬ್ಯಾನರ್ನಲ್ಲಿ ನನ್ನ ಫೋಟೊ ಸೇರಿಸಿ, ಕುತಂತ್ರದಿಂದ ಹಲವು ಸಾಕ್ಷಿ ಸಿದ್ದಪಡಿಸಿದ್ದು, ಅವರು ಸಿದ್ದರಾಮಯ್ಯ ಅವರ ಏಜೆಂಟ್ ರೀತಿ ಕೆಲಸ ಮಾಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ. ಕ್ಷೇತ್ರದ ಜನರಲ್ಲಿ ಸ್ವಲ್ಪ ಗೊಂದಲಗಳಿದ್ದು, ಅದಕ್ಕೆ ಸಭೆ ಕರೆಯಲಾಗಿದೆ. ನಾಮಪತ್ರ ಸಲ್ಲಿಕೆಗೆ ಒಂದು ಲಕ್ಷ ಜನರನ್ನು ಸೇರಿಸಲು ನಿರ್ಧರಿಸಲಾಗಿದೆ. ಕ್ಷೇತ್ರದ ಜನರಲ್ಲಿ ಹುಮ್ಮಸ್ಸು ಬಂದಿದೆ. ಹೀಗಾಗಿ ಒಂದು ಲಕ್ಷ ಜನ ಸೇರಿಸುತ್ತಿದ್ದೇವೆ ಎಂದರು. ಹಿರಿಯ ಅಣ್ಣನಾಗಿ ನಾನು ಇಂದು ಲಖನ್ ಅವರನ್ನು ಭೇಟಿ ಮಾಡಲಿದ್ದೇನೆ. ಸ್ಪರ್ಧೆ ಮಾಡದಂತೆ ಲಖನ್ಗೆ ತಿಳಿ ಹೇಳುತ್ತೇನೆ ಎಂದರು.
ನಮ್ಮ ಮೇಲೆ ಯಾವುದೇ ಹಗರಣ ಇಲ್ಲ. ಹೀಗಾಗಿ ಸತೀಶ್ ಅಳಿಯನ ಮೇಲೆ ವಾಗ್ದಾಳಿ ಮಾಡುತ್ತಿದ್ದಾರೆ. ಲಖನ್ ನಿಲುವು ತಿಳಿಯುತ್ತಿಲ್ಲ. ಒಂದೇ ರಾತ್ರಿ ಯಾವ ಜಾದು ಆಗಿದೆಯೋ ಗೊತ್ತಿಲ್ಲ. ಲಖನ್ ಬದಲಾಗಿದ್ದಾನೆ. ನನಗೆ ಇಂದಿಗೂ ಆತನ ಮೇಲೆ ಪ್ರೀತಿಯಿದೆ. ಆತ ನನ್ನ ಪ್ರೀತಿಯ ತಮ್ಮ. ಈ ಚುನಾವಣೆಯಲ್ಲಿ ಅವರು ಸ್ಪರ್ಧಿಸುವುದು ಬೇಡ. ಮುಂದಿನ ಚುನಾವಣೆಯಲ್ಲಿ ಗೋಕಾಕ್ ಕ್ಷೇತ್ರ ಬಿಟ್ಟುಕೊಟ್ಟು ಗೆಲ್ಲಿಸುತ್ತೇನೆ. ನಾನು ಯಮಕನಮರಡಿ ಕ್ಷೇತ್ರದಿಂದ ಸ್ಪರ್ಧಿಸಿ, ಸತೀಶ್ ಜಾರಕಿಹೊಳಿ ತಾಕತ್ತು ಎಷ್ಟಿದೆ ಎಂದು ನೋಡುತ್ತೇನೆ ಎಂದು ಹೇಳಿದರು.