ಬೆಳಗಾವಿ: ಜಿಲ್ಲೆಯಲ್ಲಿನ ನದಿಗಳ ಒತ್ತುವರಿ ಅಪಾರ ಪ್ರಮಾಣದಲ್ಲಿ ಆಗಿರುವ ಕಾರಣ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಹೀಗಾಗಿ ನದಿ ಒತ್ತುವರಿಯ ಸರ್ವೇ ಮಾಡಲು ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಶೀಘ್ರವೇ ಸಮಿತಿ ರಚನೆ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದರು.
ಸಿಎಂ ಜೊತೆಗಿನ ವೈಮಾನಿಕ ಸಮೀಕ್ಷೆ ಬಳಿಕ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಲಪ್ರಭಾ, ಘಟಪ್ರಭಾ, ಕೃಷ್ಣಾ ನದಿಗಳು ಹೆಚ್ಚಿನ ಪ್ರಮಾಣದಲ್ಲಿ ಒತ್ತುವರಿಯಾಗಿದೆ. ಈ ಬಗ್ಗೆ ಆಲಮಟ್ಟಿಯಲ್ಲಿ ನಡೆದ ಸಭೆಯಲ್ಲಿ ವಿಷಯ ಚರ್ಚೆಗೆ ಬಂದಿದೆ. ಹೀಗಾಗಿ ಈ ಬಗ್ಗೆ ಸರ್ವೇ ಮಾಡಿಸಲು ಸಿಎಂ ಸೂಚನೆ ನೀಡಿದ್ದಾರೆ. ಹೀಗಾಗಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಮಿತಿ ರಚಿಸಿ ಸರ್ವೇ ಮಾಡಲಾಗುವುದು. ಆರಂಭದಲ್ಲಿ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ನಡೆಯಲಿದೆ. ಬರುವ ದಿನಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ನದಿಗಳ ಒತ್ತುವರಿ ಸರ್ವೇ ನಡೆಯಲಿದೆ ಎಂದರು.
ಬೆಳಗಾವಿ ಮತ್ತು ಆಲಮಟ್ಟಿಯಲ್ಲಿ ಸಿಎಂ ಸ್ಥಳೀಯ ಜನಪ್ರತಿನಿಧಿ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ. ಬೆಂಗಳೂರಿಗೆ ಹೋಗಿ ಮತ್ತೊಮ್ಮೆ ಅಧಿಕಾರಿಗಳ ಹಾಗೂ ಸಚಿವರ ಸಭೆ ನಡೆಸಲಿದ್ದಾರೆ. ಬಳಿಕ ಜಿಲ್ಲಾವಾರು ಪರಿಹಾರ ನೀಡಲು ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.
ಮುಂಬೈ ಕರ್ನಾಟಕ ಭಾಗದಲ್ಲಿ ಈ ಸಲ ಮಳೆಯಿಂದಾಗಿ ಹಾನಿಯಾಗಿದೆಯೇ ಹೊರತು ಪ್ರವಾಹದಿಂದಲ್ಲ. ಐದು ಜಿಲ್ಲೆಗಳಿಗೆ ಆದಷ್ಟು ಬೇಗ ಸರ್ಕಾರದಿಂದ ಪರಿಹಾರ ಬಿಡುಗಡೆ ಮಾಡಲಾಗುತ್ತದೆ. ಕಳೆದ ವರ್ಷದ ಬಾಕಿ ಇರುವ ಪರಿಹಾರ ಹಣ ನೀಡುವಂತೆ ಮನವಿ ಮಾಡಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.
ರಾಮದುರ್ಗ ತಾಲೂಕಿನ ಪ್ರವಾಹ ಸಂತ್ರಸ್ತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ನಾಳೆ ರಾಮದುರ್ಗ ತಾಲೂಕಿಗೆ ಭೇಟಿ ನೀಡಿ, ಪ್ರತಿಭಟನಾ ನಿರತರ ಸಮಸ್ಯೆಗಳನ್ನು ಆಲಿಸುತ್ತೇನೆ. ರಾಮದುರ್ಗ ತಾಲೂಕಿನ 30 ಗ್ರಾಮಗಳ ಸ್ಥಳಾಂತರ ಬಗ್ಗೆ ಪರಿಶೀಲನೆ ಮಾಡುತ್ತೇನೆ ಎಂದರು.