ಬೆಳಗಾವಿ : ರಾಜ್ಯ ಬಿಜೆಪಿ ಸರ್ಕಾರದಲ್ಲಿ ಸಚಿವಾಕಾಂಕ್ಷಿಗಳ ಕಸರತ್ತು ಮುಂದುವರೆದಿದೆ. ಸಚಿವ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕೆಲ ಶಾಸಕರು ಈಗಾಗಲೇ ಗುಪ್ತ ಸಭೆ, ಮಾತುಕತೆಯಲ್ಲಿ ತೊಡಗಿದ್ದಾರೆ. ಈ ನಡುವೆ ಮತ್ತೆ ಸಚಿವರಾಗಬೇಕೆಂದು ತೆರೆಮರೆಯಲ್ಲಿ ಕಸರತ್ತು ಮುಂದುವರೆಸಿರುವ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ದೆಹಲಿಗೆ ಹಾರಲಿದ್ದಾರೆ ಎನ್ನಲಾಗುತ್ತಿದೆ.
ಸದ್ಯ ಗೋವಾಕ್ಕೆ ತೆರಳಿರುವ ಮಾಜಿ ಸಚಿವ ಜಾರಕಿಹೊಳಿ, ಅಲ್ಲಿಂದ ದೆಹಲಿಗೆ ತೆರಳಿ ಹೈಕಮಾಂಡ್ ಭೇಟಿಗೆ ಮುಂದಾಗಲಿದ್ದಾರೆ. ಆ ಮೂಲಕ ಮತ್ತೆ ಸಚಿವ ಸ್ಥಾನ ಗಿಟ್ಟಿಸಿಕೊಳ್ಳಲು ಮಾತುಕತೆ ನಡೆಸಲಿದ್ದಾರೆ ಎಂಬ ಮಾತು ಕೇಳಿ ಬಂದಿವೆ.
ಇತ್ತೀಚೆಗೆ ಮಾಜಿ ಸಚಿವ ರೇಣುಕಾಚಾರ್ಯ ಕೂಡ ಸಚಿವರಾಗಲು ತೀವ್ರ ಯತ್ನ ನಡೆಸುತ್ತಿದ್ದಾರೆ. 15 ಸಚಿವರನ್ನು ಸಂಪುಟದಿಂದ ಕೈಬಿಡಬೇಕು, ದುರಹಂಕಾರಿ ಸಚಿವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷರಿಗೆ ದೂರು ನೀಡಿದ್ದೇನೆ ಎಂದು ಇತ್ತೀಚೆಗೆ ಸ್ವಪಕ್ಷೀಯ ಸಚಿವರ ವಿರುದ್ಧವೇ ಅವರು ಗುಡುಗಿದ್ದರಲ್ಲದೆ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭೇಟಿ ಮಾಡಿ ಮಾತುಕತೆ ನಡೆಸಿದ್ದರು.
ಇದನ್ನೂ ಓದಿ: ಜೀವಂತ ಹಲ್ಲಿಯನ್ನು ಸಲೀಸಾಗಿ ತಿಂದ ಭೂಪ - ವಿಡಿಯೋ ವೈರಲ್
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ್ದ ರೇಣುಕಾಚಾರ್ಯ, ಎರಡು ದಿನಗಳ ಹಿಂದೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಫೋನ್ ಮಾಡಿದ್ದರು, ಬಹಿರಂಗ ಹೇಳಿಕೆ ಬೇಡ ಎಂದಿದ್ದಾರೆ. ಹೇಳಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆ ಆಗುತ್ತದೆ, ಇದೇ 8, 9, 10ರಂದು ದೆಹಲಿಗೆ ಬನ್ನಿ ಎಂದು ತಿಳಿಸಿದ್ದಾರೆ. ಅವರನ್ನ ಭೇಟಿ ಮಾಡಿ ಎಲ್ಲ ವಿಚಾರಗಳ ಬಗ್ಗೆ ಮಾತನಾಡಲಿದ್ದೇನೆ ಎಂದಿದ್ದಾರೆ.
ಇನ್ನೊಂದೆಡೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನವದೆಹಲಿ ಪ್ರವಾಸ ಮುಂದೂಡಿಕೆಯಾಗಿದೆ. ನಾಳೆ ದೆಹಲಿಗೆ ತೆರಳಲು ಸಿದ್ದರಾಗಿದ್ದ ಸಿಎಂ ಇದೀಗ ಪ್ರವಾಸದಲ್ಲಿ ಬದಲಾವಣೆ ಮಾಡಿದ್ದು, ಸೋಮವಾರ ರಾಷ್ಟ್ರ ರಾಜಧಾನಿಗೆ ತೆರಳುವುದಾಗಿ ತಿಳಿಸಿದ್ದಾರೆ.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ