ಬೆಳಗಾವಿ: ಪಕ್ಷದಲ್ಲಿದ್ದುಕೊಂಡು ಮೋಸ ಮಾಡಿದವರ ಬಗ್ಗೆ ಯಾರಿಗೆ ಹೇಳಬೇಕೋ ಅವರಿಗೆ ಹೇಳಿದ್ದೇನೆ. ಅವರನ್ನ ಮನೆಗೆ ಕಳಿಸದೇ ಬಿಡೋದಿಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದ್ದಾರೆ. ತಾಲೂಕಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಕ್ಷದಲ್ಲಿದ್ದುಕೊಂಡು ಮೋಸ ಮಾಡಿದವರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದ್ದಾರೆ.
ಪಕ್ಷ, ಸಂಘ ಪರಿವಾರ, ದೆಹಲಿ ಹೈಕಮಾಂಡ್ ನನ್ನನ್ನು ಬಹಳ ಚೆನ್ನಾಗಿ ನೋಡಿಕೊಂಡಿದೆ. ಪಕ್ಷದಲ್ಲಿದ್ದ ಕೆಲವರು ಮೋಸ ಮಾಡಿದ್ದಾರೆ. ಅದರ ಬಗ್ಗೆ ಈಗ ಹೇಳೋದು ಬೇಡ, ಆಮೇಲೆ ಹೇಳ್ತೇನೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದು ಆತುರದ ನಿರ್ಧಾರ ಅಲ್ಲ. ನಮ್ಮ ಮನೆಯಲ್ಲಿ ಇನ್ನೂ ಬ್ರದರ್ಸ್, ನನ್ನ ಮಕ್ಕಳು ಇದ್ದಾರೆ. ಇನ್ನೂ ರಗಡ (ಸಾಕಷ್ಟು) ಹುಲಿ ಇವೆ. ರಮೇಶ್ ಜಾರಕಿಹೊಳಿಯನ್ನು ಮೂಲೆ ಗುಂಪು ಮಾಡಿದ್ರೆ ಮುಗೀತು ಅಂತಾ ವಿರೋಧಿಗಳು ತಿಳಿದಿರಬೇಕು. ನಮ್ಮಲ್ಲಿ ಹತ್ತು ಪಟ್ಟು ಹೆಚ್ಚು ಹುಲಿಗಳು ಇದ್ದು, ನಾವು ರೆಡಿ ಇದ್ದೇವೆ ಎಂದರು.
ಅಸಮಾಧಾನವಿದೆ. ಆದರೆ ಕೆಲವೊಂದನ್ನು ಬಹಿರಂಗಪಡಿಸಲು ಬರಲ್ಲ. ನಾನು ಈಗ ಹೇಳೋದಿಲ್ಲ. ಕೆಲವು ತಾಂತ್ರಿಕ ಸಮಸ್ಯೆ, ಕಾನೂನು ತೊಡಕುಗಳಿವೆ. ಎಟು ದಿನಗಳ ಕಾಲ ಸಮಯ ಕೊಡಿ, ನಾನು ಮಾತನಾಡ್ತೇನೆ ಎಂದು ತಿಳಿಸಿದ್ದರು.
ಸುತ್ತೂರು ಮಠಕ್ಕೆ ಹೋಗಿದ್ದರಲ್ಲಿ ರಾಜಕಾರಣ ಇಲ್ಲ:
ಶ್ರೀಗಳ ತಾಯಿ ತೀರಿಕೊಂಡಿದ್ದರಿಂದ ಸುತ್ತೂರು ಮಠಕ್ಕೆ ಭೇಟಿ ನೀಡಿದ್ದೆ. ಸುತ್ತೂರು ಮಠಕ್ಕೆ ಹೋಗಿದ್ದರಲ್ಲಿ ಯಾವುದೇ ರಾಜಕಾರಣ ಇಲ್ಲ. ಮುಂಬೈ ಹೋಗಿದ್ದರಲ್ಲಿ ರಾಜಕಾರಣ ಇದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡೋದು ನಿಜ. ಅದರ ಬಗ್ಗೆ ಎರಡು ಮಾತಿಲ್ಲ ಎಂದು ಸ್ಪಷ್ಟಪಡಿಸಿದರು.
ರಾಜೀನಾಮೆ ಬಗ್ಗೆ ಏಳೆಂಟು ದಿನ ಬಿಟ್ಟು ಮಾತನಾಡುವನಿದ್ದೇನೆ:
ಆಂತರಿಕವಾಗಿ ನಾನು ಮಿತ್ರಮಂಡಳಿ ಜತೆಗೆ ಮಾತನಾಡಿದ್ದೆ. ಮಾಧ್ಯಮಗಳಿಗೆ ಹೇಗೆ ಲೀಕ್ ಆಯ್ತೋ ಎಂಬುದು ಗೊತ್ತಿಲ್ಲ. ನಾನು ರಾಜೀನಾಮೆ ನೀಡಬೇಕೆಂಬ ನಿರ್ಧಾರಕ್ಕೆ ಬಂದಿದ್ದು ನಿಜ. ಆದ್ರೆ, ಇವತ್ತಲ್ಲ, ಇನ್ನೂ ಏಳೆಂಟು ದಿನ ಬಿಟ್ಟು ಮಾತನಾಡುವನಿದ್ದೇನೆ. ನಮ್ಮ ಹಿತೈಷಿಗಳು ಮಾತನಾಡಿದ್ದಾರೆ. ಇನ್ನೊಂದೆಂಟು ದಿನ ಟೈಮ್ ನೀಡಿ, ಬಳಿಕ ರಾಜೀನಾಮೆ ಬಗ್ಗೆ ಮಾತನಾಡೋಣ ಎಂದರು.
ಮಂತ್ರಿ ಸ್ಥಾನಕ್ಕೆ ಲಾಭಿ ಮಾಡುವವನಲ್ಲ:
ಮಂತ್ರಿ ಸ್ಥಾನಕ್ಕೆ ಲಾಭಿ ಮಾಡುವಂತಹ ಸಣ್ಣ ಮನುಷ್ಯ ನಾನಲ್ಲ. ಸರ್ಕಾರ ತಗೆದು ಸರ್ಕಾರ ತರುವ ಶಕ್ತಿ ನನಗೆ ದೇವರು ಕೊಟ್ಟಿದ್ದಾನೆ. ಮತ್ತೊಬ್ಬನನ್ನು ಮಂತ್ರಿ ಮಾಡುವ ಶಕ್ತಿ ನನಗೆ ದೇವರು ಕೊಟ್ಟಿದ್ದಾನೆ. ನನ್ನ ಮಂತ್ರಿ ಮಾಡಿ ಅಂತಾ ಯಾರ ಮನೆಗೂ ಹೋಗುವಂತಹ ಸಣ್ಣ ಮನುಷ್ಯ ನಾನಲ್ಲ. ನಾನು ಮುಂಬೈಗೆ ಹೋಗಿ ನನ್ನ ಗಾಡ್‌ಫಾದರ್ ಭೇಟಿಯಾಗಿದ್ದು ನಿಜ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋ ಇಂಗಿತ ವ್ಯಕ್ತಪಡಿಸಿದ್ದು ನಿಜ. ರಾಜೀನಾಮೆ ನೀಡ್ತೇನೆ ಅಂದಿದ್ದು ನಿಜ. ಆದ್ರೆ ಇವತ್ತೇ ಅಂತಾ ಹೇಳಿರಲಿಲ್ಲ ಎಂದಿದ್ದಾರೆ.
ಬೆಳಗಾವಿ ಪಿಎಲ್‌ಡಿ ಬ್ಯಾಂಕ್ ಎಲೆಕ್ಷನ್ ಇದ್ದಾಗ ಸೆಪ್ಟೆಂಬರ್ 7ರಂದು ಸರ್ಕಾರ ತಗೆಯಲು ನಿರ್ಧರಿಸಿದ್ದೆ. ಆಗ ದೇವೇಂದ್ರ ಫಡ್ನವಿಸ್ ಮಹಾರಾಷ್ಟ್ರ ಸಿಎಂ ಆಗಿದ್ರು. ಸೆಪ್ಟೆಂಬರ್ 7ರಂದು ಸಂಜೆ ಪುಣೆಗೆ ಹೋಗಿ ದೇವೇಂದ್ರ ಫಡ್ನವಿಸ್ ಭೇಟಿಯಾಗಿದ್ದೆ. ಮುಂದೇನಾಗಬಹುದು ಅಂತಾ ಆವತ್ತೇ ನಾನು ಹೇಳಿದ್ದೆ. ಅದು ಇವತ್ತು ನಡೆದಿದೆ. ಅದನ್ನು ನಾನು ದೇವೇಂದ್ರ ಫಡ್ನವಿಸ್ ಅವರನ್ನು ಭೇಟಿಯಾಗಿ ನೆನಪು ಮಾಡಿದೆ.
ಇದನ್ನೂ ಓದಿ: ಹೌದು, ನಾ ಮನನೊಂದು ರಾಜೀನಾಮೆಗೆ ನಿರ್ಧಾರ ಮಾಡಿದ್ದು ನಿಜ.. ಮಾಜಿ ಸಚಿವ ರಮೇಶ್ ಜಾರಕಿಹೊಳಿ
ದೇವೇಂದ್ರ ಫಡ್ನವಿಸ್ ಇವತ್ತಿಗೂ ನನ್ನ ಬೆನ್ನಿಗೆ ನಿಂತಿದ್ದಾರೆ. ನಾನು ಸಿಎಂ ಬಿಎಸ್‌ವೈ ಸೇರಿ ಯಾರೊಂದಿಗೂ ಮಾತನಾಡಿಲ್ಲ. ನಾನು ನಾಟಕ ಮಾಡುವ ವ್ಯಕ್ತಿ ಅಲ್ಲ. ಯಡಿಯೂರಪ್ಪರವರೇ ಎರಡು ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಯುತ್ತಾರೆ. ಬಿಎಸ್‌ವೈ ನೇತೃತ್ವದಲ್ಲಿ ಚುನಾವಣೆ ಎದುರಿಸೋದಾಗಿ ಹೇಳಿದ್ದೇವೆ. ಹೈಕಮಾಂಡ್ ಏನು ನಿರ್ಧಾರ ಮಾಡುತ್ತೋ ನೋಡೋಣ. ಪಕ್ಷದಲ್ಲಿದ್ದು ಮೋಸ ಮಾಡಿದವರಿಂದ ನೋವಾಗಿದೆ. ಅವರನ್ನು ಮನೆಗೆ ಕಳಿಸದೇ ಬಿಡೋದಿಲ್ಲ ಅಂತಾ ವಿರೋಧಿಗಳಿಗೆ ರಮೇಶ್ ಜಾರಕಿಹೊಳಿ ಪರೋಕ್ಷ ಎಚ್ಚರಿಕೆ ನೀಡಿದ್ದಾರೆ.