ಬೆಳಗಾವಿ: ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮಂಗಳವಾರ ಮಧ್ಯೆರಾತ್ರಿ 12.30ಕ್ಕೆ ಕರೆ ಮಾಡಿ ಸಿಡಿ ರಿಲೀಸ್ ಮಾಡೋದಾಗಿ0 ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎನ್ನುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಕ್ಕೆ ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಸೋಲುತ್ತದೆ ಎಂಬುದು ಜಾರಕಿಹೊಳಿಗೆ ಗೊತ್ತಾಗಿದೆ: ಬೆಳಗಾವಿ ನಗರದಲ್ಲಿ ಬುಧವಾರ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರು ಗೋಕಾಕ್ ಕ್ಷೇತ್ರ ಸೇರಿದಂತೆ ಅವರ ಉಸ್ತುವಾರಿ ವಹಿಸಿಕೊಂಡಿರುವ ನಾಲ್ಕು ಕ್ಷೇತ್ರಗಳಲ್ಲಿ ಬಿಜೆಪಿ ಸೋಲುತ್ತದೆ ಎನ್ನುವುದು ಗೊತ್ತಾಗಿ ಹತಾಶರಾಗಿದ್ದಾರೆ. ಅವರಿಗೆ ಹುಚ್ಚು ಹಿಡಿದಿದೆ. ರಮೇಶ್ ಜಾರಕಿಹೊಳಿ ಉದ್ಧಟತನದ ಮಾತುಗಳನ್ನಾಡಿದ್ದಾರೆ. ಅವರಿಗೆ ತಲೆ ಕೆಟ್ಟಿದೆ. ಅಥಣಿ, ಬೆಳಗಾವಿ ಗ್ರಾಮೀಣ, ಕಾಗವಾಡ ಮತ್ತು ಗೋಕಾಕದಲ್ಲಿ ಬಿಜೆಪಿ ಸೋಲುತ್ತದೆ ಎಂದು ಹತಾಶೆರಾಗಿದ್ದಾರೆ ಎಂದು ಕಿಡಿಕಾರಿದರು.
ರಾತ್ರಿ 12.30ಕ್ಕೆ ಫೋನ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿದ್ದಾರೆ ಎಂದು ಡಿ.ಕೆ. ಶಿವಕುಮಾರ ಅವರ ಮೇಲೆ ಆರೋಪ ಮಾಡಿದ್ದಾರೆ. ಮಾನ ಮರ್ಯಾದೆ ಇದ್ದರೆ ಆರೋಪಕ್ಕೆ ಪೂರಕವಾಗಿ ಅವರು ಫೋನ್ ಕರೆಯ ಸ್ಕ್ರೀನ್ ಶಾಟ್, ಕಾಲ್ ರೆಕಾರ್ಡ್ ರಿಲೀಸ್ ಮಾಡಲಿ. ಯಾವುದೇ ಮೊಬೈಲ್ ಗೆ ಕಾಲ್ ಬಂದಿದ್ದರೂ ಅದರ ದಾಖಲೆ ನೀಡಲಿ. ಇಲ್ಲವಾದಲ್ಲಿ ಬಹಿರಂಗ ಕ್ಷಮೆ ಯಾಚಿಸಲಿ ಎಂದು ಚನ್ನರಾಜ ಹಟ್ಟಿಹೊಳಿ ಸವಾಲು ಹಾಕಿದರು.
ಚಾಮುಂಡೇಶ್ವರಿ ದೇವಿ ಆಣೆ ಮಾಡಿ ಸಿಡಿ ಪ್ರಕರಣದಲ್ಲಿದ್ದವನು ನಾನಲ್ಲ ಎಂದು ಹೇಳಿಯೂ, ಕೆಲವು ದಿನಗಳ ನಂತರ ನಾನೇ ಎಂದು ಒಪ್ಪಿಕೊಂಡ ನೀವು ಯಾವ ನೈತಿಕತೆಯಿಂದ ಮಾಧ್ಯಮಗಳ ಮುಂದೆ ಮಾತನಾಡುತ್ತೀರಿ..? ಮಾನ ಮರ್ಯಾದೆ ಇದ್ದರೆ ತಕ್ಷಣ ಫೋನ್ ನಂಬರ್ ರಿಲೀಸ್ ಮಾಡಿ, ಇಲ್ಲವೇ ಕ್ಷಮೆ ಕೇಳಿ. ನಾವು ಸಹನೆಯಿಂದ ಆರೋಪ, ಟೀಕೆಗಳಿಗೆ ಇಷ್ಟು ದಿನ ಉತ್ತರ ಕೊಟ್ಟಿರಲಿಲ್ಲ. ನಿಮ್ಮ ಉದ್ಧಟತನ ಇನ್ನು ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ರವಾನಿಸಿದರು.
ಮಾತನಾಡಲು ನಮ್ಮ ಬಳಿಯೂ ಡಿಕ್ಷನರಿ ಇದೆ. ನಾವು ಕಲಿತವರು, ಸೂಕ್ಷ್ಮತೆಯಿಂದ ಮಾತನಾಡುತ್ತೇವೆ. ಆದರೆ ಇಂತಹ ನಾಯಕರಿಗೆ ಇನ್ನು ಮುಂದೆ ಅವರದ್ದೇ ಭಾಷೆಯಲ್ಲಿ ಉತ್ತರ ಕೊಡುತ್ತೇವೆ. ಅವರ ಪ್ರಕರಣದಿಂದ ಕರ್ನಾಟಕ, ಬೆಳಗಾವಿ ಜಿಲ್ಲೆ ಮತ್ತು ಗೋಕಾಕ್ ಜನತೆಯ ಮರ್ಯಾದೆ ಹೋಗಿದೆ. ಯಾವ ಮರ್ಯಾದೆ ಇಟ್ಟುಕೊಂಡು ಮಾಧ್ಯಮದ ಮುಂದೆ ಬರುತ್ತಾರೆ? ಇವರ ಕಾಮಪುರಾಣ ಎಲ್ಲರೂ ನೋಡಿದ್ದಾರೆ. ಅಂತದ್ದರಲ್ಲಿ ಯಾವ ಮುಖ ಇಟ್ಟುಕೊಂಡು ಬರುತ್ತಾರೆ ಎಂದು ಚನ್ನರಾಜ ಹಟ್ಟಿಹೊಳಿ ಪ್ರಶ್ನಿಸಿದರು.
ರಮೇಶ್ ಜಾರಕಿಹೊಳಿ ಗೋಕಾಕ್ದಲ್ಲಿ ಸೋಲುತ್ತಾರೆ. ಹಾಗಾಗಿ ಹತಾಶರಾಗಿದ್ದಾರೆ. ಬೆಳಗಾವಿ ಗ್ರಾಮೀಣದಲ್ಲಿ ಬಿಜೆಪಿ ಮತಗಳನ್ನು ಎಂಇಎಸ್ಗೆ ಹಾಕಿಸಲು ಬಹಳ ಪ್ರಯತ್ನ ಮಾಡಿದ್ದಾರೆ. ಆದರೆ ಜನರು ಒಪ್ಪಲಿಲ್ಲ. ಅವರ ಕುತಂತ್ರವನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ. ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಅದನ್ನು ಪರೀಕ್ಷಿಸಬೇಡಿ ಎಂದು ತರಾಟೆಗೆ ತೆಗೆದುಕೊಂಡರು.
ಇದನ್ನೂಓದಿ:ನಿನ್ನೆ ಮಧ್ಯರಾತ್ರಿವರೆಗೂ ಸಿಡಿ ಬಿಡ್ತಿನಿ ಅಂತಾ ಡಿಕೆಶಿ ಬ್ಲ್ಯಾಕ್ಮೇಲ್ ಮಾಡ್ತಿದ್ರು: ರಮೇಶ ಜಾರಕಿಹೊಳಿ ಆರೋಪ