ಬೆಳಗಾವಿ: ದೊಡ್ಡ ಹುದ್ದೆಯಲ್ಲಿರುವವರು ಸಣ್ಣ ಹುದ್ದೆಯಲ್ಲಿರುವವರಿಗೆ ಅವಕಾಶ ಮಾಡಿಕೊಡುವ ಮೂಲಕ ತ್ಯಾಗ ಮಾಡಬೇಕೆಂದು ಡಿಸಿಎಂ ಲಕ್ಷ್ಮಣ್ ಸವದಿಗೆ ಸಚಿವ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.
ಡಿಸಿಸಿ ಬ್ಯಾಂಕ್ ಚುನಾವಣೆ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೊಡ್ಡ ಹುದ್ದೆಯಲ್ಲಿ ಇರುವವರು ಡಿಸಿಸಿ ಬ್ಯಾಂಕಿನಂತಹ ಸಣ್ಣ ಹುದ್ದೆಗಳನ್ನು ತ್ಯಾಗ ಮಾಡಬೇಕು. ತ್ಯಾಗ ಮಾಡಿದ್ರೆ ಒಳ್ಳೆಯದಾಗುತ್ತೆ. ಸ್ವಾರ್ಥ ಇಟ್ಟುಕೊಂಡು ಸಭೆ ಮಾಡಿದ್ರೆ ಸರಿಹೋಗಲ್ಲ ಎಂದು ಡಿಸಿಎಂ ಲಕ್ಷ್ಮಣ್ ಸವದಿಗೆ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಟಾಂಗ್ ಕೊಟ್ಟರು.
ಡಿಸಿಸಿ ಬ್ಯಾಂಕ್ ಚುನಾವಣೆಯನ್ನು ಶಾಂತ ರೀತಿಯಿಂದ ನಡೆಸಿ ಎಂದು ಆರ್‌ಎಸ್‌ಎಸ್ ನಾಯಕರು ನಮಗೆ ಸೂಚನೆ ಕೊಟ್ಟಿದ್ದಾರೆ. ಆ ಸೂಚನೆ ಪಾಲಿಸಬೇಕಾದರೆ ತ್ಯಾಗ ಮಾಡಲು ಸಿದ್ಧರಿರಬೇಕು. ಉನ್ನತ ಹುದ್ದೆಯಲ್ಲಿದ್ದವರು ಸಣ್ಣ ಹುದ್ದೆಗೆ ಬರಬಾರದು. ಕಾರ್ಯಕರ್ತರಿಗೆ ಅವಕಾಶ ಕೊಡಬೇಕು ಎಂಬ ಉದ್ದೇಶ ನಮ್ಮದು. ನಾನು ಮನಸ್ಸು ಮಾಡಿದ್ರೆ ನನ್ನ ಮಗನನ್ನು ಡಿಸಿಸಿ ಬ್ಯಾಂಕ್ ನಿರ್ದೇಶಕನನ್ನಾಗಿ ಮಾಡಬಹುದು. ಆದ್ರೆ ನಾನು ಕಾರ್ಯಕರ್ತನನ್ನು ನಿರ್ದೇಶಕನನ್ನಾಗಿ ಮಾಡುತ್ತೇನೆ. ತ್ಯಾಗ ಮಾಡಿದ್ರೆ ಒಳ್ಳೆಯದಾಗುತ್ತೆ ಎಂದರು.
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಹಿನ್ನೆಲೆ ಅವಿರೋಧ ಆಯ್ಕೆಗೆ ಆರ್‌ಎಸ್‌ಎಸ್ ನಾಯಕರ ಸಲಹೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಆ ಸಭೆಯಲ್ಲಿ ನಾನಿರಲಿಲ್ಲ. ಆರ್‌ಎಸ್‌ಎಸ್ ನಾಯಕರು ಎಂದಿಗೂ ರಾಜಕೀಯ ವಿಚಾರದಲ್ಲಿ ಬರಲ್ಲ. ಆದರೆ ಅರವಿಂದರಾವ್ ದೇಶಪಾಂಡೆ ನಮ್ಮ ಮಾರ್ಗದರ್ಶಕರಾಗಿ ಹೇಳಿದ್ದಾರೆ. ಆ ಬಗ್ಗೆ ನಾವು ಎಲ್ಲರೂ ಸೇರಿ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಸಹಕಾರ ರಂಗದಲ್ಲಿ ಪಕ್ಷ ಬರೋದಿಲ್ಲ. ಕಳೆದ 20 ವರ್ಷಗಳಿಂದ ಬೆಳಗಾವಿ ಡಿಸಿಸಿ ಬ್ಯಾಂಕ್‌ನಲ್ಲಿ ಎಲ್ಲಾ ಪಕ್ಷದವರು ನಿರ್ದೇಶಕರಿದ್ದಾರೆ. ನಿರ್ದೇಶಕರು ಯಾರಾಗಬೇಕು ಎಂಬುದನ್ನು ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ನಿರ್ಧರಿಸುತ್ತಾರೆ. ಉಮೇಶ್ ಕತ್ತಿ, ಬಾಲಚಂದ್ರ ಜಾರಕಿಹೊಳಿ ಕೈಗೊಳ್ಳುವ ನಿರ್ಣಯಕ್ಕೆ ನಾವು ಬದ್ಧ. ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ಹೇಳಿಕೆ ಬಗ್ಗೆ ಹೆಚ್ಚೇನೂ ಮಾತನಾಡಲ್ಲ ಎಂದು ಹೇಳಿದರು.
ಮಾಜಿ ಸಚಿವ ಪ್ರಕಾಶ್ ಹುಕ್ಕೇರಿ ವೈಯಕ್ತಿಕ ಅಭಿಪ್ರಾಯದ ಬಗ್ಗೆ ಸಾಕಷ್ಟು ಚರ್ಚೆಯಾಗಿದೆ. ಪ್ರಕಾಶ್ ಹುಕ್ಕೇರಿ ಹೇಳಿಕೆ ಬಗ್ಗೆ ನಮ್ಮ ಜಿಲ್ಲಾಧ್ಯಕ್ಷ ಸಂಜಯ್ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ. ವೈಯಕ್ತಿಕವಾಗಿ ಪ್ರಕಾಶ್ ಹುಕ್ಕೇರಿ ಏನು ನಿರ್ಧರಿಸುತ್ತಾರೆ ಎಂಬುದನ್ನು ಮುಂದೆ ನೋಡೋಣ. ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡುತ್ತೋ ಅವರನ್ನು ಗೆಲ್ಲಿಸಿ ತರುತ್ತೇವೆ. ಐದರಿಂದ ಆರು ಲಕ್ಷ ವೋಟ್ ಲೀಡ್ ಮೂಲಕ ಗೆಲ್ಲುವ ವ್ಯವಸ್ಥೆಯನ್ನು ನಾವು ಮಾಡಿದ್ದೇವೆ. ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾರ್ಯಕರ್ತರ ದಂಡು ಈಗ ಸಿದ್ಧವಾಗಿದೆ. ಆದಷ್ಟು ಶೀಘ್ರವೇ ಎಲೆಕ್ಷನ್ ಡಿಕ್ಲೇರ್ ಆಗಲಿ. ದಿ. ಸುರೇಶ್ ಅಂಗಡಿ ಮಾಡಿದ ಕೆಲಸ ಮುಂದುವರೆಸುವ ಅಭ್ಯರ್ಥಿ ಕೊಟ್ರೆ ಒಳ್ಳೆಯದು ಎಂದರು.
ಐವರು ಕಾಂಗ್ರೆಸ್ ಎಂಎಲ್‌ಎಗಳು ಬಿಜೆಪಿಗೆ ಬರಲು ಸಿದ್ಧರಿದ್ದಾರೆಂಬ ಲಕ್ಷ್ಮಣ್ ಸವದಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಡಿಸಿಎಂ ಹೇಳಿಕೆ ನೀಡಿದ ಬಗ್ಗೆ ನನಗೆ ಮಾಹಿತಿ ಇಲ್ಲ. ಈ ಬಗ್ಗೆ ಡಿಸಿಎಂ ಲಕ್ಷ್ಮಣ್ ಸವದಿ ಅವರನ್ನೇ ಕೇಳಿದರೆ ಸೂಕ್ತ ಎಂದರು.
ಸುರೇಶ್ ಅಂಗಡಿ ಬದುಕಿದ್ರೆ ದೊಡ್ಡ ಹುದ್ದೆಯಲ್ಲಿರುತ್ತಿದ್ದರು ಎಂಬ ಹೇಳಿಕೆ ಕುರಿತು ಮಾತನಾಡಿದ ಸಚಿವ ಜಾರಕಿಹೊಳಿ, ಸುರೇಶ್ ಅಂಗಡಿ ಒಳ್ಳೆಯ ಕೆಲಸ ಮಾಡುತ್ತಿದ್ದರು. ನಾನು ಹೇಗೆ ತಡವಾಗಿ ಸಚಿವ ಆದೆನೋ ಹಾಗೆ ಸುರೇಶ್ ಅಂಗಡಿ ಕೂಡ ತಡವಾಗಿ ಕೇಂದ್ರ ಸಚಿವರಾಗಿದ್ದರು. ಅವರಿಗೆ ಒಳ್ಳೆಯ ಸ್ಥಾನ ಸಿಗುತ್ತಿತ್ತು. ಆದ್ರೆ ಅಕಾಲಿಕ ನಿಧನ ಹೊಂದಿದರು. ಸುರೇಶ್ ಅಂಗಡಿ ನಿಧನದಿಂದ ವೈಯಕ್ತಿಕವಾಗಿ, ರಾಜ್ಯಕ್ಕೆ ಹಾನಿಯಾಗಿದೆ ಎಂದರು.
ಸುರೇಶ್ ಅಂಗಡಿ ಸೋದರಮಾವ ಲಿಂಗರಾಜ ಪಾಟೀಲ್ ಏನು ಹೇಳಿದ್ದಾರೆ ಎಂಬುದನ್ನು ನಾನು ನೋಡಿಲ್ಲ. ಸುರೇಶ್ ಅಂಗಡಿ ಸಿಎಂ ಆಗುತ್ತಿದ್ರು ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಅವರ ರಾಜಕೀಯ ಭವಿಷ್ಯ ಒಳ್ಳೆಯದಿತ್ತು. ಮುಂದಿನ ಬಾರಿ ಬಿಜೆಪಿ ಸರ್ಕಾರ ಬಂದ್ರೆ ಉತ್ತರ ಕರ್ನಾಟಕದವರು ಸಿಎಂ ಆಗ್ತಾರೆ ಎಂಬ ಅಭಿಪ್ರಾಯಕ್ಕೆ ಪ್ರತಿಕ್ರಿಯಿಸಿ, ನಾವು ಅಖಂಡ ಕರ್ನಾಟಕ ರಾಜಕೀಯದಲ್ಲಿ ವಿಶ್ವಾಸ ಇಟ್ಟವರು. ಅಖಂಡ ಕರ್ನಾಟಕದಲ್ಲಿ ಯಾರೇ ಸಿಎಂ ಆದರೂ ಅವರು ನಮ್ಮ ಮುಖ್ಯಮಂತ್ರಿಯೇ. ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ನೀಡಿರುವ ಹೇಳಿಕೆ ಅವರ ವೈಯಕ್ತಿಕ ಅಭಿಪ್ರಾಯ ಎಂದರು.