ಬೆಳಗಾವಿ: ಪೃಥ್ವಿ ಸಿಂಗ್ ಹಲ್ಲೆ ಪ್ರಕರಣದಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಳ್ಳುವುದು ಅನುಮಾನ. ಹೈದರಾಬಾದ್ನಿಂದ ಪೊಲೀಸರ ಮೇಲೆ ಒತ್ತಡ ಬರುತ್ತಿದೆ. ನನಗೆ ಬಂದ ಮಾಹಿತಿ ಪ್ರಕಾರ ಬೆಂಗಳೂರಿನ ಎಡಿಜಿಪಿ ದರ್ಜೆಯ ಪೊಲೀಸ್ ಅಧಿಕಾರಿಗಳು ಸ್ಥಳೀಯ ಪೊಲೀಸರಿಗೆ ಎಫ್ಐಆರ್ ದಾಖಲಿಸದಂತೆ ಒತ್ತಡ ಹೇರುತ್ತಿದ್ದಾರೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಆರೋಪಿಸಿದ್ದಾರೆ.
ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ದುರ್ದೈವದ ಸಂಗತಿ ಎಂದರೆ ಪೊಲೀಸರ ಕ್ರಮ ನನಗೆ ಬಹಳ ಕೆಟ್ಟದಾಗಿ ಅನಿಸುತ್ತಿದೆ. ಬಿಹಾರದಲ್ಲೂ ಈ ರೀತಿ ಆಗಲ್ಲ. ಘಟನೆ ನಡೆದು ಇಷ್ಟೊತ್ತಾದರೂ ಎಫ್ಐಆರ್ ಆಗಿಲ್ಲ. ಪೊಲೀಸರು ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ ಎಂದು ರಮೇಶ್ ಜಾರಕಿಹೊಳಿ ದೂರಿದ್ದಾರೆ.
ಪೊಲೀಸರಿಗೆ ನಾನು ಎಚ್ಚರಿಕೆ ಕೊಡುತ್ತೇನೆ. ನಿಜಸಂಗತಿ ಹೊರಗೆ ಬರಬೇಕು. ತಪ್ಪು ಮಾಡಿದವರ ಮೇಲೆ ಕ್ರಮ ಆಗಬೇಕು. ಅಕಸ್ಮಾತ್ ಪೊಲೀಸರು ಹೀಗೆ ಮಾಡಿದರೆ ಪೊಲೀಸರ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಮೊರೆ ಹೋಗುತ್ತೇವೆ. ಎಫ್ಐಆರ್ ಮಾಡುವುದು ತಪ್ಪಲ್ಲ ಮತ್ತು ಅದು ಫೈನಲ್ ಅಲ್ಲ. ಪ್ರಕರಣವನ್ನು ಬಹಳ ಗಂಭೀರವಾಗಿ ತೆಗೆದುಕೊಂಡಿದ್ದೇವೆ. ಸ್ಥಳೀಯವಾಗಿ ತನಿಖೆ ಆಗಲಿ, ಆದಷ್ಟು ಬೇಗನೆ ನ್ಯಾಯ ಸಿಗಲಿ. ಲಾಟರಿ ಮಂತ್ರಿ, ಲಾಟರಿ ಎಂಎಲ್ಎ ಸದ್ಯದಲ್ಲೇ ಅವರು ಮಾಜಿ ಆಗುತ್ತಾರೆ. ಇನ್ನು ಪೃಥ್ವಿ ಸಿಂಗ್ ಪರವಾಗಿ ನೂರಕ್ಕೆ ನೂರು ನಾನು ನಿಲ್ಲುತ್ತೇನೆ. ಒಂದು ವೇಳೆ ಪೃಥ್ವಿ ಸಿಂಗ್ ತಪ್ಪು ಮಾಡಿದ್ದರೆ ನಾನು ಅವನ ವಿರುದ್ಧ ಇರುತ್ತೇನೆ ಎಂದು.
ಲ್ಯಾಂಡ್ ಮಾಫಿಯಾ ಜೋರಾಗಿದೆ ಎಂಬ ವಿಚಾರಕ್ಕೆ ಪಾರಿಶ್ವಾಡದಲ್ಲಿ ಮಹಿಳೆಯರೇ ಗೂಂಡಾಗಿರಿ ಮಾಡುತ್ತಿದ್ದಾರೆ. ಬೇಲಿ ಹಚ್ಚಿ ರಸ್ತೆ ಬಂದ್ ಮಾಡಿ, ಹೊಲ ಆಕ್ರಮಿಸುತ್ತಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ನಿಜವಾಗಿ ಯಾರಿಗಾದರೂ ಅನ್ಯಾಯವಾದರೆ ಅವರ ಪರವಾಗಿ ನಾನು ನಿಲ್ಲುತ್ತೇನೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಕನಕಪುರ ಆಗುತ್ತಿದೆ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹರಿಹಾಯ್ದರು.
ಬೆಳಗಾವಿ ಗ್ರಾಮೀಣದಲ್ಲಿ ಲ್ಯಾಂಡ್ ಮಾಫಿಯಾ ಅತೀ ಹೆಚ್ಚು ನಡೆಯುತ್ತಿದೆ. ಬಹಳಷ್ಟು ಬಡವರ ಜಮೀನನ್ನು ಕಬ್ಜಾ ಮಾಡಿಕೊಂಡು ಉತಾರದಲ್ಲಿ ತಮ್ಮ ಹೆಸರು ಸೇರಿಸುವುದು ಮತ್ತು ಕೋರ್ಟ್ ಮೂಲಕ ಆದೇಶ ಮಾಡಿಕೊಳ್ಳುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಇನ್ನು ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹಾಳಾಗಿದೆ. ಕೊತ್ವಾಲ್ ರಾಮಚಂದ್ರನ ಶಿಷ್ಯರು ಅಧಿಕಾರದಲ್ಲಿದ್ದಾಗ ಹೇಗೆ ನ್ಯಾಯ ಸಿಗುತ್ತದೆ. ಹಾಗಾಗಿ, ಇದನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ರಮೇಶ್ ಹೇಳಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ದಲಿತರ, ಬಡವರ ಮೇಲೆ ಅನ್ಯಾಯ ಆಗುತ್ತಿದೆ. ರವಿ ಪೂಜಾರಿಯಂತ ಭೂಗತ ಪಾತಕಿಯಿಂದ ಹಲವು ಬಾರಿ ನನಗೂ ಜೀವ ಬೆದರಿಕೆ ಬಂದಿದೆ. ಪೃಥ್ವಿ ಸಿಂಗ್ ಬೋಗಸ್ ವ್ಯಕ್ತಿ ಎಂಬ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿಕೆಗೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಳೆದು ಬಂದಿರುವುದು ಬೆಳಗಾವಿಯ ಮೂಲೆ ಮೂಲೆಗೂ ಗೊತ್ತಿದೆ ಎಂದು ಲೇವಡಿ ಮಾಡಿದರು. ಪೃಥ್ವಿ ಸಿಂಗ್ ಯಾರದೋ ಮಾತು ಕೇಳಿ ಹೀಗೆ ಮಾಡಿದ್ದಾರೆ ಎಂಬ ಹೆಬ್ಬಾಳ್ಕರ್ ಹೇಳಿಕೆಗೆ, ಅವರ ಮನಸ್ಸಿನಲ್ಲಿ ರಮೇಶ್ ಜಾರಕಿಹೊಳಿ ಇರಬಹುದು. ಪೃಥ್ವಿ ಸಿಂಗ್ ನನ್ನ ಶಿಷ್ಯ ಇದ್ದಿದ್ದಕ್ಕೆ ಈ ರೀತಿ ತಿಳಿದಿರಬಹುದು. ಆದರೆ ನಾನು ಅಂತಹ ಕೀಳು ರಾಜಕಾರಣ ಮಾಡಲ್ಲ. ಜಾರಕಿಹೊಳಿ ಕುಟುಂಬ ಚಿಲ್ಲರೆ ರಾಜಕಾರಣ ಮಾಡುವುದಿಲ್ಲ ಎಂದು ತಿರುಗೇಟು ಕೊಟ್ಟರು.
ಇದನ್ನೂ ಓದಿ: ಹಲ್ಲೆಗೊಳಗಾದ ಬಿಜೆಪಿ ಮುಖಂಡನ ಆರೋಗ್ಯ ವಿಚಾರಿಸಿದ ವಿಜಯೇಂದ್ರ; ಆರೋಪಿಗಳನ್ನು ಬಂಧಿಸುವಂತೆ ಆಗ್ರಹ