ಬೆಳಗಾವಿ: ಕಾಂಗ್ರೆಸ್ ಒಂದು ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದು ಯಶಸ್ವಿ ಆಗಿದೆಯಾ ಎಂಬ ಪ್ರಶ್ನೆ ಇದೀಗ ಮೂಡುತ್ತಿದೆ.
ರೋಷನ್ ಬೇಗ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಬೆನ್ನಲ್ಲೇ ಯಾವೊಬ್ಬ ಅತೃಪ್ತ ನಾಯಕರು, ಪಕ್ಷದ ವಿರುದ್ಧ ಮಾತನಾಡುವ ಧೈರ್ಯ ಮಾಡುತ್ತಿಲ್ಲ ಎಂಬುದಂತು ಸ್ಪಷ್ಟ.
ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿ ಸಾರ್ವಜನಿಕ ಕಾರ್ಯಕ್ರಮಕ್ಕೆ ಆಗಮಿಸಿದ ಮಾಜಿ ಸಚಿವ ರಾಮಲಿಂಗಾರೆಡ್ಡಿ, ಸಚಿವ ಸ್ಥಾನ ಕೈ ತಪ್ಪಿದ್ದರ ಬಗ್ಗೆ ಮಾತನಾಡಲು ಹಿಂದೇಟು ಹಾಕಿದರು. ಈಗಾಗಲೇ ನಾನು ಇದರ ಬಗ್ಗೆ ಮಾತನಾಡಿದ್ದೇನೆ ಸದ್ಯಕ್ಕೆ ಅದರ ಬಗ್ಗೆ ಯಾವುದೇ ಮಾತು ಬೇಡ. ರಾಜಕೀಯ ವಿಷಯದ ಕುರಿತು ನೋ ಕಾಮೆಂಟ್ ಎಂದರು.
ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರು ಹಾಗೂ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಾಗಿದ್ದ ರಾಮಲಿಂಗಾರೆಡ್ಡಿ, ಸರ್ಕಾರ ಹಾಗೂ ಪಕ್ಷದ ಕುರಿತು ಯಾವುದೇ ಹೇಳಿಕೆ ನೀಡಲು ಮುಂದಾಗಲಿಲ್ಲ. ಮೊದಲು ಒಬ್ಬರಾದ ಮೇಲೆ ಮತ್ತೊಬ್ಬರು ಸಚಿವ ಸ್ಥಾನಬೇಕು ಎಂದು ಹೇಳಿಕೆ ನೀಡುವುದು ಸಾಮಾನ್ಯವಾಗಿತ್ತು ಆದರೆ ಸದ್ಯ ಅತೃಪ್ತ ಶಾಸಕರ ಪರಿಸ್ಥಿತಿ ವಿಭಿನ್ನವಾಗಿದೆ.
ರೋಷನ್ ಬೇಗ್ ಅವರಿಗೆ ಕೊಟ್ಟ ಔಷಧಿ ಪಕ್ಷದ ಎಲ್ಲ ಅತೃಪ್ತರಿಗೂ ತಟ್ಟಿದ್ದು, ಅದು ಸರಿಯಾದ ರೀತಿಯಲ್ಲಿ ಕೆಲಸ ಮಾಡಿದೆ ಎನ್ನಲಾಗುತ್ತಿದೆ. ಹೀಗಾಗಿ ತಾವು ಸಚಿವ ಸ್ಥಾನದ ಆಕಾಂಕ್ಷಿ ಎಂದು ಪ್ರತಿದಿನ ಹೇಳಿಕೆ ನೀಡುತ್ತಿದ್ದ ಸಚಿವರು ಈಗ ಮೌನಕ್ಕೆ ಶರಣಾಗಿದ್ದಾರೆ.