ಚಿಕ್ಕೋಡಿ (ಬೆಳಗಾವಿ ): ಮುಂದಿನ ದಿನಗಳಲ್ಲಿ ಕಾಂಗ್ರೆಸ್ ನವರು ಭಾರದ ದೇಶ, ರಾಮ ಮಂದಿರ, ಕಾಶಿ ವಿಶ್ವನಾಥ ದೇವಾಲಯ ಕಟ್ಟಿದ್ದು ಮುಸ್ಲಿಮರು ಎಂದು ಹೇಳಿದರೂ ಅಚ್ಚರಿ ಇಲ್ಲ. ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿಟಿ ರವಿ ಹೇಳಿದರು. ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದಲ್ಲಿ ವಿಜಯ ಸಂಕಲ್ಪ ಯಾತ್ರೆ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವ ಮೊದಲು ಅವರು ಈ ಮಾತು ಹೇಳಿದರು.
ಕಾಂಗ್ರೆಸ್ ನವರ ಹಳೆ ಡ್ರಾಮಾ : ಡಿಕೆಶಿ ಆಪ್ತ ಹಾಗೂ ಮೂಡಬಿದರೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಮಿಥುನ್ ರೈ ತಮ್ಮ ಭಾಷಣದಲ್ಲಿ ಉಡುಪಿ ಶ್ರೀಕೃಷ್ಣ ಮಠಕ್ಕೆ ಮುಸ್ಲಿಂ ರಾಜರು ಭೂಮಿಯನ್ನು ನೀಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಸಿಟಿ ರವಿ ಪ್ರತಿಕ್ರಿಯೆ ನೀಡಿ ಮಾತನಾಡುತ್ತ ಭಾರತ ಎಂದು ಹೆಸರು ಕೊಟ್ಟಿದ್ದೇ ಮುಸಲ್ಮಾನ ದೊರೆಗಳು ಅಂತಾ ಹೇಳಿದ್ರೂ ಅಚ್ಚರಿ ಇಲ್ಲ ಎಂದು ಟಾಂಗ್ ಕೊಟ್ಟರು. ಇನ್ನು ಚಿಕ್ಕಮಗಳೂರು ಕ್ಷೇತ್ರದಲ್ಲಿ ಸಿಟಿ ರವಿ ನೀಡಿದ್ದ ಸೀರೆ ಸುಟ್ಟು ಹಾಕಿದ ವಿಚಾರವಾಗಿ ಮಾತನಾಡಿ, ಅವರೆಲ್ಲಾ ಡ್ರಾಮಾ ಆಡ್ತಾರೆ, ಆ ರೀತಿ ನಾವು ಕೊಡುತ್ತಾ ಇಲ್ಲ, ಅವರೆಲ್ಲ ಕಾಂಗ್ರೆಸ್ನವರ ಹಳೇ ಡ್ರಾಮಾ ಎಂದ ಪ್ರತಿಕ್ರಿಯೆ ನೀಡಿದರು.
ಬರೀ ಕೃಷ್ಣ ಮಠ ಅಲ್ಲ ಭಾರತ ಅಂತಾ ಹೆಸರು ಕೊಟ್ಟಿದ್ದು, ಮುಸಲ್ಮಾನ ದೊರೆಗಳು, ಮುಸಲ್ಮಾನ ದೊರೆಗಳೇ ರಾಮ ಮಂದಿರ ನಿರ್ಮಾಣ ಮಾಡಿದ್ದು, ಮುಸಲ್ಮಾನ ದೊರೆಗಳೇ ಕಾಶಿ ವಿಶ್ವನಾಥನ ಪ್ರತಿಷ್ಠಾಪನೆ ಮಾಡಿದ್ದು ಅಂತಾ ಹೇಳಿದ್ರೂ ಅಚ್ಚರಿ ಪಡಬೇಕಿಲ್ಲ. ಸುಳ್ಳು ಮತ್ತು ಕಾಂಗ್ರೆಸ್ ಒಂದು ನಾಣ್ಯದ ಎರಡು ಮುಖಗಳು, ಸುಳ್ಳನ್ನು ಸತ್ಯದ ರೀತಿಯಲ್ಲಿ ಹೇಳುವುದು ಅವರಿಗಿರುವ ಕಾಯಿಲೆ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಿಟಿ ರವಿ ಲೇವಡಿ ಮಾಡಿದರು.
ಕಾಂಗ್ರೆಸ್ ಸೋಲು ಖಚಿತ: 2008 ಹಾಗೂ 15ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಜನರು ಅತಿ ಹೆಚ್ಙು ಸ್ಥಾನ ಕೊಟ್ಟರು. ಆದರೆ, ಗರಿಷ್ಠ ಸ್ಥಾನ ನೀಡದೇ ಇರುವುದರಿಂದ ರಾಜ್ಯವು ಪರಿತಪಿಸುವಂತ ವಾತಾವರಣ ನಿರ್ಮಾಣವಾಯಿತು. ಆ ರೀತಿ ಆಗಬಾರದು ಎಂದರೆ ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ಮ್ಯಾಜಿಕ್ ನಂಬರ್ಗಿಂತಲೂ ಹೆಚ್ಚಿನ ಸ್ಥಾನವನ್ನು ನೀಡುವಂತೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿಟಿ ರವಿ ಮತದಾರರಲ್ಲಿ ಮನವಿ ಮಾಡಿದರು.
ಸರ್ಕಾರ ನಡೆಸುವುದಕ್ಕೆ ಹೆಚ್ಚಿನ ಸ್ಥಾನಗಳು ಬಂದರೇ ಜನರು ಅಪೇಕ್ಷೆ ಪಟ್ಟಂತೆ ಕೆಲಸ ಕಾರ್ಯಗಳನ್ನು ಮಾಡಬಹುದು. ಜನ ಸಂಕಲ್ಪ ಯಾತ್ರೆಗೆ ಹೆಚ್ಚಿನ ಜನಬೆಂಬಲ ಸಿಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಷಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಆಗಮನ ಕಾರ್ಯಕ್ರಮಗಳಲ್ಲಿ ಅಭೂತಪೂರ್ವ ಜನಬೆಂಬಲ ಹಿನ್ನೆಲೆಯಲ್ಲಿ ಕಾಂಗ್ರೆಸ್ನವರಿಗೆ ನಿರಾಶೆಯಾಗಿದೆ. ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದ್ದರು. ಆದರೆ, ಬಿಜೆಪಿ ಪಕ್ಷಕ್ಕೆ ಜನ ಬೆಂಬಲ ನೋಡಿ ನಮಗೆ ಸೋಲು ಖಚಿತ ಎಂದು ಕಾಂಗ್ರೆಸ್ ನವರು ಬಾಯಿಗೆ ಬಂದಹಾಗೆ ಮಾತನಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ಇದನ್ನೂ ಓದಿ :ಶಿವಾಜಿ ಪ್ರತಿಮೆ ಲೋಕಾರ್ಪಣೆ: ಪ್ರವಾಸೋದ್ಯಮಕ್ಕೆ ಹೆಚ್ಚು ಒತ್ತು ಕೊಡುವುದಾಗಿ ಸಿಎಂ ಭರವಸೆ