ಚಿಕ್ಕೋಡಿ: ಅಥಣಿಯಲ್ಲಿಂದು ವಿವಿಧ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಬಿಜೆಪಿ ಅಭ್ಯರ್ಥಿ ಮಹೇಶ ಕುಮಟಳ್ಳಿ, ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ, ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ ಉಮೇದುವಾರಿಕೆ ಸಲ್ಲಿಸಲಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ, ಹೊಸದಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ. ಈ ಪಕ್ಷದವರನ್ನು ಪರಿಚಯ ಮಾಡಿಕೊಳ್ಳಲು ಕಾರ್ಯಕರ್ತರ ಸಭೆ ಕರೆದಿದ್ದೇನೆ ಎಂದು ಹೇಳಿದ್ದಾರೆ.
ಉಗಾರ ಪಟ್ಟಣದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಭೆ ಬಳಿಕ ಮಾತನಾಡಿದ ಅವರು, ಕಾಂಗ್ರೆಸ್ ಅಭ್ಯರ್ಥಿಯಾಗಿ ಉಪಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನಾಮಪತ್ರ ಸಲ್ಲಿಕೆ ವೇಳೆ ಸುಮಾರು 20 ರಿಂದ 25 ಸಾವಿರ ಕಾರ್ಯಕರ್ತರು ಸೇರುವ ನಿರೀಕ್ಷೆಯಿದೆ. ಯಾವುದೇ ರ್ಯಾಲಿ ನಡೆಸಲು ಅವಕಾಶವಿಲ್ಲ, ಆದ್ದರಿಂದ ನಾಮಪತ್ರ ಸಲ್ಲಿಸಿದ ಬಳಿಕ ಪಕ್ಷದ ಮುಖಂಡರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದರು.
ಕಾಂಗ್ರೆಸ್ ಕಾರ್ಯಕರ್ತರ ಸಭೆಗೆ ಮಾಜಿ ಸಂಸದ ಪ್ರಕಾಶ್ ಹುಕ್ಕೇರಿ ಗೈರಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಕಾಗೆ ಅವರು, ಪ್ರಕಾಶ್ ಹುಕ್ಕೇರಿಯವರ ಆರೋಗ್ಯ ಸರಿ ಇಲ್ಲ. ಆದ್ದರಿಂದ ಸಭೆಗೆ ಹಾಜರಾಗಿಲ್ಲ. ನಾವು- ಅವರು ಸಂಬಂಧಿಕರಾಗಿದ್ದೇವೆ, ಇದಕ್ಕೆ ಬೇರೆ ಅರ್ಥ ಕಲ್ಪಿಸುವುದು ಬೇಡ ಎಂದು ಸಮಜಾಯಿಷಿ ನೀಡಿದರು. ಅಥಣಿ ಕಾಂಗ್ರೆಸ್ ಅಭ್ಯರ್ಥಿ ಗಜಾನನ ಮಂಗಸೂಳಿ ಕೂಡ ರಾಜು ಕಾಗೆ ಜೊತೆ ನಾಮಪತ್ರ ಸಲ್ಲಿಸಲಿದ್ದಾರೆ.
ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ್ ಒಟ್ಟಿಗೆ ನಾಮಪತ್ರ ಸಲ್ಲಿಕೆ: ಅಥಣಿ ನಗರದ ಬಿಡಿಎನಿಂದ ಸಿದ್ದೇಶ್ವರ ದೇವಸ್ಥಾನದವರೆಗೆ ಓಪನ್ ಜೀಪ್ನಲ್ಲಿ ಮೆರವಣಿಗೆ ಮಾಡಿ, ಮಧ್ಯಾಹ್ನ 11 ಗಂಟೆಗೆ ಅಥಣಿ ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ್ ಒಟ್ಟಿಗೆ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ.
ಬಿಜೆಪಿ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆಗೆ ಸಚಿವರಾದ ಜಗದೀಶ್ ಶೆಟ್ಟರ್, ಸಚಿವ ಈಶ್ವರಪ್ಪ, ಡಿಸಿಎಂ ಲಕ್ಷ್ಮಣ್ ಸವದಿ ಸಾಥ್ ನೀಡಲಿದ್ದಾರೆ.
ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಬುಟಾಳೆ ನಾಮಪತ್ರ ಸಲ್ಲಿಕೆ: ಅಥಣಿ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ವಂಚಿತರಾಗಿರುವ ಸದಾಶಿವ ಬುಟಾಳೆಯೂ ನಾಮಪತ್ರ ಸಲ್ಲಸಲಿದ್ದು, ಸಂಜೆ 4 ಗಂಟೆಗೆ ಸಿದ್ದೇಶ್ವರ ದೇವಸ್ಥಾನದಿಂದ ಮೆರವಣಿಗೆ ಮೂಲಕ ಸಾಗಿ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ.
ಕಾಗವಾಡ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತುಗಶೆಟ್ಟಿ ನಾಮಪತ್ರ ಸಲ್ಲಿಕೆ: ಮಧ್ಯಾಹ್ನ 1ಗಂಟೆಗೆ ಕಾಗವಾಡ ಜೆಡಿಎಸ್ ಅಭ್ಯರ್ಥಿ ಶ್ರೀಶೈಲ ತುಗಶೆಟ್ಟಿ ನಾಮಪತ್ರ ಸಲ್ಲಿಕೆ ಮಾಡಲಿದ್ದು, ಜೆಡಿಎಸ್ ಮುಖಂಡರು, ಮಾಜಿ ಸಚಿವ ಸಾ ರಾ ಮಹೇಶ್ ಹಾಗೂ ಸಿ.ಎಸ್. ಪುಟ್ಟರಾಜು ಸಾಥ್ ನೀಡಲಿದ್ದಾರೆ.