ಅಥಣಿ: ಎರಡು ದಿನಗಳಿಂದ ತಾಲೂಕಿನಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಮಳೆ ಇಂದು ಸ್ವಲ್ಪ ವಿರಾಮ ನೀಡಿದೆ. ಮಳೆಯಿಂದಾಗಿ ತಾಲೂಕಿನ ಹಲವು ಗ್ರಾಮಗಳಲ್ಲಿ ಮನೆಗಳು ನೆಲಕಚ್ಚಿ, ಹತ್ತಾರು ಕುಟುಂಬಗಳು ಪರದಾಡುವಂತಾಗಿದೆ.
ತಾಲೂಕಿನಲ್ಲಿ ದರೂರ, ಶಿರಹಟ್ಟಿ, ಝುಂಜರವಾಡ, ಕೊಟ್ಟಲಗಿ, ಸತ್ತಿ ಹಾಗೂ ಹಲವಾರು ಗ್ರಾಮಗಳಲ್ಲಿ ಕಲ್ಲು ಮಣ್ಣಿನಿಂದ ನಿರ್ಮಿಸಿದ ಮನೆಗಳು ಕುಂಭದ್ರೋಣ ಮಳೆಯ ಅಬ್ಬರದಿಂದ ಕುಸಿದುಬಿದ್ದಿವೆ. ಕೆಲವರು ಮನೆ ಕಳೆದುಕೊಂಡು ರಾತ್ರಿಯಿಡೀ ಪರದಾಡುವಂತಾಗಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಈವರೆಗೆ ತಾಲೂಕಿನಲ್ಲಿ 40 ಹೆಚ್ಚು ಮನೆಗಳು ಕುಸಿದು ಬಿದ್ದಿದ್ದು, ಮನೆ ಕಳೆದುಕೊಂಡ ಸಂತ್ರಸ್ತರು ರಾತ್ರಿಯಿಡಿ ಬೇರೆ ಸ್ಥಳಗಳಿಗೆ ತೆರಳಿ ಜೀವ ರಕ್ಷಿಸಿಕೊಂಡಿದ್ದಾರೆ. ಹಲವಾರು ಮನೆಗಳ ಮೇಲ್ಛಾವಣಿ ಸೋರುತಿದ್ದು, ಜೀವ ಭಯದಲ್ಲೇ ಜನರು ಜೀವನ ಸಾಗಿಸುತ್ತಿದ್ದಾರೆ.
ಇತ್ತ ಕಳೆದ ರಾತ್ರಿಯಿಂದ ಮಳೆ ಅಬ್ಬರ ಕಡಿಮೆಯಾಗಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಈ ಮಧ್ಯೆ ಸರ್ಕಾರಕ್ಕೆ ಸೂಕ್ತ ಪರಿಹಾರ ನೀಡುವಂತೆ ಸಂತ್ರಸ್ತರು ಒತ್ತಾಯಿಸುತ್ತಿದ್ದಾರೆ.