ಬೆಳಗಾವಿ: ನಗರದ 5 ವರ್ಷದ ಮಗುವಿಗೆ ಮಹಾರಾಷ್ಟ್ರ ಸರ್ಕಾರದ ಸಹಕಾರದಿಂದ ಬೇಕಾದ ಅಗತ್ಯ ಔಷಧಗಳನ್ನು ಪುಣೆಯಿಂದ ತರಿಸುವ ಮೂಲಕ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಮಾನವೀಯತೆ ಮೆರೆದಿದ್ದಾರೆ.
ಹೌದು, ಐದು ವರ್ಷದ ಮಗುವಿಗೆ ಅಗತ್ಯವಿದ್ದ ಔಷಧಗಳನ್ನು ಪುಣೆಯಿಂದ ರೈಲಿನ ಮೂಲಕ ಬೆಳಗಾವಿಗೆ ತರಿಸಿದ ಸುರೇಶ್ ಅಂಗಡಿ, ಮಗುವಿನ ಜೀವ ಉಳಿಸುವ ಮೂಲಕ ಮಾದರಿಯಾಗಿದ್ದಾರೆ.
ಬೆಳಗಾವಿಯಲ್ಲಿನ 5 ವರ್ಷದ ಮಗುವಿಗೆ ಪುಣೆಯ ವೈದ್ಯರು ಚಿಕಿತ್ಸೆ ನೀಡುತ್ತಿದ್ದರು. ಇದರಿಂದಾಗಿ ಮಗುವಿಗೆ ಔಷಧ ತರಲು ಪುಣೆಗೆ ಹೋಗಬೇಕಾಗಿತ್ತು. ಆದರೆ, ಲಾಕ್ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಸುರೇಶ ಅಂಗಡಿ ಮಹಾರಾಷ್ಟ್ರ ಸರ್ಕಾರದ ಜೊತೆ ಮಾತನಾಡಿ ಪುಣೆಯಿಂದ ಔಷಧ ತರಲು ಸಹಕಾರ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದರು.
ಪರಿಸ್ಥಿತಿ ಗಂಭೀರತೆ ಅರಿತ ಸಚಿವರು ಪುಣೆಯಲ್ಲಿರುವ ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರಿಂದ ಮಗುವಿನ ಔಷಧವನ್ನು ಪುಣೆ ರೈಲು ನಿಲ್ದಾಣಕ್ಕೆ ತರಲಾಯಿತು. ಬಳಿಕ ಬೆಳಗಾವಿ ಮಾರ್ಗವಾಗಿ ಸಂಚಾರ ನಡೆಸುತ್ತಿದ್ದ ಗೂಡ್ಸ್ ರೈಲಿನಲ್ಲಿ ಅದನ್ನು ಬೆಳಗಾವಿಗೆ ಕಳುಹಿಸಿಕೊಡಲಾಯಿತು. ಮರುದಿನ ಬೆಳಗ್ಗೆ ಔಷಧಗಳು ಬೆಳಗಾವಿ ತಲುಪಿತು. ಲಾಕ್ಡೌನ್ ಇದ್ದುದರಿಂದ ರೈಲ್ವೆ ಅಧಿಕಾರಿಗಳು ತಾವೇ ಔಷಧವನ್ನು ಮಗುವಿನ ಮನೆಗೆ ತಲುಪಿಸಿ, ಜೀವವನ್ನು ಉಳಿಸಿದ್ದಾರೆ.