ಬೆಳಗಾವಿ: ಇಲ್ಲಿನ ಬಿಮ್ಸ್ ಅವ್ಯವಸ್ಥೆ ಸರಿಪಡಿಸಲು ಶೀಘ್ರವೇ ಐಎಎಸ್ ಅಧಿಕಾರಿಯನ್ನು ಆಡಳಿತ ಅಧಿಕಾರಿಯಾಗಿ ನೇಮಿಸುತ್ತೇನೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಮ್ಸ್ ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಗೊತ್ತಿದೆ. ಈ ಸಂಬಂಧ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಈಗಷ್ಟೇ ಚರ್ಚೆ ಮಾಡಿದ್ದೇನೆ. ಐಎಎಸ್ ಅಧಿಕಾರಿಯನ್ನ ಆಡಳಿತ ಅಧಿಕಾರಿಯಾಗಿ ನೇಮಕ ಮಾಡಲಾಗುವುದು. ಬಿಮ್ಸ್ ನಿರ್ದೇಶಕ ವಿನಯ್ ದಾಸ್ತಿಕೊಪ್ಪ ರಜೆ ಮೇಲೆ ಹೋಗಿದ್ದಾರೆ. ಬಿಮ್ಸ್ ಅವ್ಯವಸ್ಥೆ ಸರಿಪಡಿಸುತ್ತೇನೆ ಎಂದು ಭರವಸೆ ನೀಡಿದರು.
ಸಕ್ಕರೆ ಕಾರ್ಖಾನೆಗಳು ಕಬ್ಬು ಬೆಳೆಗಾರರಿಗೆ ಕೊಡಬೇಕಾಗಿರುವ ಬಾಕಿ ಬಿಲ್ ಆದಷ್ಟು ಬೇಗ ಕೊಡಿಸುತ್ತೇವೆ ಎಂದರು. ಇದೇ ವೇಳೆ ಎಸ್ಎಸ್‌ಎಲ್‌ಸಿ ಪರೀಕ್ಷೆ ನಡೆಸುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಬಂದರೆ ಮಾತ್ರ ಜುಲೈನಲ್ಲಿ ಪರೀಕ್ಷೆ ನಡೆಸುತ್ತೇವೆ. ಇಲ್ಲವಾದರೆ ಪರೀಕ್ಷೆ ನಡೆಸುವುದಿಲ್ಲ ಎಂದರು.
ಸಿಎಂ ಜೊತೆಗೆ ಡಿಸಿಎಂಗಳಾದ ಗೋವಿಂದ ಕಾರಜೋಳ, ಲಕ್ಷ್ಮಣ ಸವದಿ, ಸಚಿವರಾದ ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಶ್ರೀಮಂತ ಪಾಟೀಲ ಉಪಸ್ಥಿತರಿದ್ದರು.