ಬೆಳಗಾವಿ: ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಶಾಸಕ ಅಭಯ್ ಪಾಟೀಲ್ ನಡುವೆ ಜಟಾಪಟಿ ಮುಂದುವರಿದಿದೆ. ಇಲ್ಲಿನ ತಿನಿಸು ಕಟ್ಟೆ ನಿರ್ಮಾಣ ಹಾಗೂ ಬಾಡಿಗೆ ಹಂಚಿಕೆಯಲ್ಲಿ ಗೋಲ್ ಮಾಲ್ ಆರೋಪ ಹಿನ್ನೆಲೆ ಇಂದು ಬೆಂಗಳೂರಿನ ಲೋಕೋಪಯೋಗಿ ಇಲಾಖೆಯ ಚೀಫ್ ಇಂಜಿನಿಯರ್ ದುರ್ಗಪ್ಪ ನೇತೃತ್ವದ ತಂಡ ತಿನಿಸು ಕಟ್ಟೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಬೆಳಗಾವಿಯ ಲೋಕೋಪಯೋಗಿ ಇಲಾಖೆಯಿಂದ ಶಾಸಕರ ಅನುದಾನದಡಿ ನಗರದ ಬಸವೇಶ್ವರ ವೃತ್ತದ ಬಳಿ ತಿನಿಸು ಕಟ್ಟೆ ನಿರ್ಮಾಣವಾಗಿತ್ತು. ಅರ್ಹರಿಗೆ ಮಳಿಗೆಗಳ ಹಂಚಿಕೆ ಮಾಡದೇ ಶಾಸಕರ ಬೆಂಬಲಿಗರಿಗೆ ಮತ್ತು ಕಾರ್ಯಕರ್ತರಿಗೆ ನೀಡಲಾಗಿದೆ. ಪಕ್ಕದಲ್ಲಿದ್ದ ರಾಜಕಾಲುವೆ ನಿಯಮಗಳನ್ನು ಉಲ್ಲಂಘಿಸಿ ತಿನಿಸು ಕಟ್ಟೆ ನಿರ್ಮಿಸಲಾಗಿದೆ. ಪ್ರಕಟಣೆಯೇ ಆಗದ ಎರಡು ಪತ್ರಿಕೆಗಳಲ್ಲಿ ಟೆಂಡರ್ ಪ್ರಕ್ರಿಯೆಯ ಜಾಹೀರಾತು ನೀಡಿದ್ದು, ಕೇವಲ 65 ಜನ ಮಾತ್ರ ಹರಾಜು ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು ಎಂದೆಲ್ಲಾ ಆರೋಪ ಮಾಡಿ ತನಿಖೆಗೆ ಸಚಿವ ಸತೀಶ್ ಜಾರಕಿಹೊಳಿ ಒತ್ತಾಯಿಸಿದ್ದರು.
ತಿನಿಸು ಕಟ್ಟೆಯಲ್ಲಿ ಅವ್ಯವಹಾರ ಆರೋಪ ಕೇಳಿ ಬಂದ ಹಿನ್ನೆಲೆ ಇಂದು ಲೋಕೋಪಯೋಗಿ ಇಲಾಖೆಯ ಮುಖ್ಯ ಇಂಜಿನಿಯರ್ ದುರ್ಗಪ್ಪ ನೇತೃತ್ವದಲ್ಲಿ ಆರು ಅಧಿಕಾರಿಗಳ ತಂಡ ತಿನಿಸು ಕಟ್ಟೆಗೆ ದೌಡಾಯಿಸಿ, ತಿನಿಸು ಕಟ್ಟೆ ನಿರ್ಮಾಣ ವೆಚ್ಚ, ಬಾಡಿಗೆ ಹಂಚಿಕೆ ಸೇರಿ ಮತ್ತಿತರ ವಿಚಾರಗಳ ಕುರಿತು ಮಾಹಿತಿ ಸಂಗ್ರಹಿಸಿದ್ದಾರೆ.
ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯ ವಾಗ್ವಾದ: ಅಧಿಕಾರಿಗಳು ತಿನಿಸು ಕಟ್ಟೆಗೆ ಬರುತ್ತಿದ್ದಂತೆ ಸ್ಥಳದಲ್ಲಿ ಬಿಜೆಪಿ-ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು. ಇದೇ ವೇಳೆ ಅಕ್ರಮದ ಬಗ್ಗೆ ಅಧಿಕಾರಿಗಳಿಗೆ ಸತೀಶ್ ಜಾರಕಿಹೊಳಿ ಬೆಂಬಲಿಗರು ಮಾಹಿತಿ ನೀಡುತ್ತಿರುವುದಕ್ಕೆ ಬಿಜೆಪಿ ಪಾಲಿಕೆ ಸದಸ್ಯೆ ಸಾರಿಕಾ ಪಾಟೀಲ ಆಕ್ಷೇಪ ವ್ಯಕ್ತಪಡಿಸಿದರು. ಇದರಿಂದ ಎರಡೂ ಗುಂಪುಗಳ ಮಧ್ಯೆ ವಾಗ್ವಾದ ಮಾತಿನ ಚಕಮಕಿ ನಡೆದು, ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ತಕ್ಷಣವೇ ಮಧ್ಯಪ್ರವೇಶಿಸಿದ ಟಿಳಕವಾಡಿ ಠಾಣೆ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸ ಪಟ್ಟರು.
ಮುಖ್ಯ ಇಂಜಿನಿಯರ್ ದುರ್ಗಪ್ಪ ಮಾಧ್ಯಮಗಳ ಜೊತೆಗೆ ಮಾತನಾಡಿ, ಇಲ್ಲಿನ ಮಳಿಗೆಗಳ ಮೂಲ ಮಾಲೀಕರ ಕುರಿತು ಲೋಕೋಪಯೋಗಿ ಇಲಾಖೆ ಮತ್ತು ಮಹಾನಗರ ಪಾಲಿಕೆಯಿಂದ ಮಾಹಿತಿ ಕೇಳುತ್ತೇವೆ. ಅಲ್ಲದೇ ಅಂಗಡಿಗಳ ಹಂಚಿಕೆ, ಪರವಾನಿಗೆ ಪಾದರ್ಶಕವಾಗಿ ನಡೆದಿದೆಯೇ ಎಂಬ ಕುರಿತು ಮಾಹಿತಿ ಕಲೆ ಹಾಕುತ್ತಿದ್ದೇವೆ. ಇನ್ನು ಈ ತಿನಿಸು ಕಟ್ಟೆ ರಾಜಕಾಲುವೆ ಮೇಲೆ ನಿರ್ಮಾಣ ಮಾಡಲಾಗಿದೆಯಾ ಎಂಬ ಕುರಿತೂ ಮಾಹಿತಿ ಪಡೆದು ಅಂತಿಮವಾಗಿ ಸರ್ಕಾರಕ್ಕೆ ಒಂದು ವಾರದೊಳಗೆ ವರದಿ ಸಲ್ಲಿಸುತ್ತೇವೆ ಎಂದರು.
ಓದಿ: ಬೆಳಗಾವಿಯಲ್ಲಿ ತಿನಿಸು ಕಟ್ಟೆ ನಿರ್ಮಾಣ : ನೂತನ ಮಳಿಗೆಗಳಿಗೆ ಡಾ.ಪ್ರಭಾಕರ ಕೋರೆ ಚಾಲನೆ