ಅಥಣಿ (ಬೆಳಗಾವಿ): ಕಳೆದ ತಿಂಗಳು ಕೃಷ್ಣಾ ನದಿ ಪ್ರವಾಹದಿಂದ ನದಿಪಾತ್ರದ ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸರ್ಕಾರದಿಂದ ಪರಿಹಾರ ನೀಡುವಂತೆ ಅಥಣಿ ತಹಶೀಲ್ದಾರ್ ಅವರನ್ನು ಕೇಳಿದರೆ, ಅವಾಚ್ಯ ಪದಗಳಿಂದ ನಿಂದನೆ ಮಾಡುತ್ತಿದ್ದಾರೆ ಎಂದು ನೆರೆ ಸಂತ್ರಸ್ತರು ಗಂಭೀರ ಆರೋಪ ಮಾಡಿದ್ದಾರೆ.
ಸರ್ಕಾರ ತುರ್ತಾಗಿ 10 ಸಾವಿರ ರೂಪಾಯಿ ಹಾಗೂ ಮನೆ ಕಳೆದುಕೊಂಡ ನೆರೆ ಸಂತ್ರಸ್ತರ ಮನೆ ಸರ್ವೇ ಮಾಡುವಂತೆ ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಆದರೆ ಸರ್ವೇ ಕಾರ್ಯದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಹಾಗೂ ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮನಬಂದಂತೆ ಹಾಗೂ ಅವಾಚ್ಯ ಪದ ಬಳಸಿ ಮಾತನಾಡುತ್ತಿದ್ದಾರೆಂದು ಸತ್ತಿ ಗ್ರಾಮಸ್ಥರು ದೂರಿದ್ದು, ಮಿನಿ ವಿಧಾನಸೌಧ ಮುಂಭಾಗ ಪ್ರತಿಭಟನೆ ನಡೆಸಿದರು.
ಪ್ರತಿಭಟನೆ ಕಾವು ತೀವ್ರವಾಗುತ್ತಿದಂತೆ ಅಥಣಿ ಪಿಎಸ್ಐ ಸ್ಥಳಕ್ಕಾಗಮಿಸಿ ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದರು. ಗ್ರಾಮಸ್ಥರು ಬಹಿರಂಗವಾಗಿ ತಹಶೀಲ್ದಾರ್ ಕ್ಷಮೆ ಆಚರಿಸಬೇಕು ಎಂದು ಪಟ್ಟು ಹಿಡಿದಿದ್ದು, ಸದ್ಯ ಅಥಣಿ ಪೊಲೀಸ್ ಮಧ್ಯಸ್ಥಿಕೆಯಲ್ಲಿ ಪ್ರತಿಭಟನೆ ಕೈಬಿಡಲಾಗಿದೆ.
ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ ಮಾತನಾಡಿ, ರೈತರಿಗೆ ನಾನು ಯಾವುದೇ ಅವಾಚ್ಯ ಪದ ಬಳಕೆ ಮಾಡಿಲ್ಲ. ಸೂಕ್ತ ರೀತಿಯಲ್ಲಿ ಸರ್ವೇ ಕಾರ್ಯ ನಿರ್ವಹಿಸುವಂತೆ ನೋಡಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಆದರೂ ಕೆಲ ಗ್ರಾಮಸ್ಥರು ಆರೋಪ ಮಾಡುತ್ತಿದ್ದಾರೆ. ಸ್ಥಳಕ್ಕೆ ನಾನೇ ಖುದ್ದಾಗಿ ಹೋಗಿ ಪರಿಶೀಲನೆ ಮಾಡುತ್ತೇನೆ ಎಂದರು.
ಇದನ್ನೂ ಓದಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರಕ್ಕೆ ಗಡುವು ನೀಡಿದ ರುಪ್ಸಾ