ಬೆಳಗಾವಿ: ಕೇಂದ್ರದಂತೆ ರಾಜ್ಯ ಸರ್ಕಾರವೂ ಕೃಷಿ ಕಾನೂನುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿ ಸುವರ್ಣಸೌಧ ಮುತ್ತಿಗೆಗೆ ಯತ್ನಿಸಿದ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಸೇರಿ ನೂರಾರು ರೈತರನ್ನು ಪೊಲೀಸರು ವಶಕ್ಕೆ ಪಡೆದರು.
ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮದಲ್ಲಿ ಜಮಾವಣೆಗೊಂಡಿದ್ದ ರೈತರು ಸುವರ್ಣಸೌಧದವರೆಗೆ ಪಾದಯಾತ್ರೆಗೆ ನಿರ್ಧರಿಸಿದ್ದರು. ಪಾದಯಾತ್ರೆಗೂ ಮುನ್ನ ಹಿರೇಬಾಗೇವಾಡಿಯ ಬಸವೇಶ್ವರ ಪುತ್ಥಳಿಗೆ ಕೋಡಿಹಳ್ಳಿ ಚಂದ್ರಶೇಖರ ಮಾಲಾರ್ಪಣೆಗೆ ಮುಂದಾದರು. ಆಗ ರೈತರನ್ನು ವಶಕ್ಕೆ ಪಡೆದ ಪೊಲೀಸರು ಒತ್ತಾಯಪೂರ್ವಕವಾಗಿ ಬಸ್ನಲ್ಲಿ ಹತ್ತಿಸಿದರು. ಬಳಿಕ ಸುವರ್ಣಸೌಧ ಎದುರಿನ ಕೊಂಡುಸಕೊಪ್ಪ ಪ್ರತಿಭಟನಾ ಸ್ಥಳಕ್ಕೆ ಕರೆತರಲಾಯಿತು. ಈ ವೇಳೆ ಪೊಲೀಸರು ಹಾಗೂ ರೈತರ ಮಧ್ಯೆ ವಾಗ್ವಾದವೂ ನಡೆಯಿತು.
ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ:
ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದಂತೆ ರಾಜ್ಯ ಸರ್ಕಾರದ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಘೋಷಣೆ ಕೂಗಿದರು. ರೈತರ ವಿರೋಧಿ ಸರ್ಕಾರ ಬಹಳ ದಿನ ಉಳಿಯಲ್ಲ ಎಂದು ರೈತ ಹೋರಾಟಗಾರ್ತಿ ಮಂಜುಳಾ ಅಸಮಾಧಾನ ವ್ಯಕ್ತಪಡಿಸಿದರು. ಕೊಂಡುಸಕೊಪ್ಪದ ಪ್ರತಿಭಟನಾ ಸ್ಥಳದಲ್ಲಿ ಕೋಡಿಹಳ್ಳಿ ಚಂದ್ರಶೇಖರ ನೇತೃತ್ವದಲ್ಲಿ ಪ್ರತಿಭಟನೆ ಮುಂದುವರೆದಿದೆ. ಹೋರಾಟದ ರೂಪುರೇಷೆಗಳ ಬಗ್ಗೆ ರೈತರು ಚರ್ಚೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಮತ್ತೆ 100 ರೂ. ದಾಟಿದ ಟೊಮೆಟೊ ಬೆಲೆ: ನುಗ್ಗೆಕಾಯಿ ದರ ಕೇಳಿ ಗ್ರಾಹಕರು ಶಾಕ್