ಬೆಳಗಾವಿ: ಪರಿಶಿಷ್ಟ ಮೀಸಲಾತಿ ಪಡೆಯುತ್ತಿರುವ ಲಂಬಾಣಿ, ಕೊರಮ, ಭೋವಿ ಹಾಗೂ ಕೊರಚ ಸಮಾಜದವರನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವಂತೆ ಆಗ್ರಹಿಸಿ ಜಿಲ್ಲೆಯ ಗೋಕಾಕನಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಗೋಕಾಕ ನಗರ ಅಂಬೇಡ್ಕರ್ ಸಮುದಾಯ ಭವನದಲ್ಲಿ ಗೋಕಾಕ ಮತ್ತು ಮೂಡಲಗಿ ತಾಲೂಕಿನ ಮಾದಿಗ ಸಮುದಾಯದ ಮುಖಂಡರು ರಕ್ತದಲ್ಲಿ ಪತ್ರ ಬರೆದು ಸಹಿ ಸಂಗ್ರಹಿಸಿದರು. ಅಲ್ಲದೇ ನಗರದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮಾಡುವ ಮೂಲಕ ಕುಡಚಿ ಶಾಸಕ ಪಿ.ರಾಜೀವ ಅವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ದಲಿತ ಮುಖಂಡರಾದ ರಮೇಶ ಮಾದರ ಮಾತನಾಡಿ, ಬೀದಿಗಿಳಿದು ಹೋರಾಟ ಮಾಡುವುದು ನಮ್ಮ ಸಮಾಜ. ಮುಖ್ಯಮಂತ್ರಿ ಯಡಿಯೂರಪ್ಪ ಅವರು ಗೆಜೆಟ್ ಪಾಸ್ ಮಾಡುವ ಮೂಲಕ ಸಂವಿಧಾನ ರಕ್ಷಣೆ ಮಾಡಬೇಕಿದೆ ಎಂದು ಒತ್ತಾಯಿಸಿದರು. ಹೀಗಾಗಿ ರಾಜ್ಯ ಸರ್ಕಾರ ಕೂಡ ತಕ್ಷಣ ಗೆಜೆಟ್ ಪಾಸ್ ಮಾಡಬೇಕೆಂದು ಆಗ್ರಹಿಸಿ ತಾಲೂಕು ತಹಶೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಜಿಲ್ಲಾಧ್ಯಕ್ಷ ರಾಜೇಂದ್ರ ಐಹೊಳೆ, ಮುಖಂಡರಾದ ರಮೇಶ ಸಣ್ಣಕ್ಕಿ, ಲಕ್ಷ್ಮಣ ಕೆಳಗಡೆ, ಕಾಡಪ್ಪ ಮೇಸ್ತ್ರಿ, ರವಿ ಕಡಕೋಳ, ಸತೀಶ್ ಹರಿಜನ ಸೇರಿದಂತೆ ಇತರರು ಉಪಸ್ಥಿತರಿದ್ದರು.