ಬೆಳಗಾವಿ: ಜಿಲ್ಲೆಯ ಶಾಲೆಗಳಲ್ಲಿ ಭಾರತ ಸಂವಿಧಾನದ ಪೀಠಿಕೆ ತೂಗು ಹಾಕುವಂತೆ ಆಗ್ರಹಿಸಿ ಡಾ.ಬಿ.ಆರ್.ಅಂಬೇಡ್ಕರ್ ಶಕ್ತಿ ಸಂಘಟನೆಯಿಂದ ಡಿಡಿಪಿಐ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಜಿಲ್ಲೆಯ ಗ್ರಾಮೀಣ ಹಾಗೂ ನಗರದಲ್ಲಿನ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಪೀಠಿಕೆಯನ್ನು ತೂಗು ಹಾಕಿಲ್ಲ. ಇದಲ್ಲದೇ ಕೆಲವೊಂದು ಶಾಲೆಗಳಲ್ಲಿ ಡಾ.ಅಂಬೇಡ್ಕರ್ ಭಾವಚಿತ್ರವನ್ನೂ ಹಾಕಿಲ್ಲ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.
ಶಾಲೆಗಳಲ್ಲಿ ಸಂವಿಧಾನ ಪೀಠಿಕೆ ಅಳವಡಿಕೆ ಕುರಿತಂತೆ ಶಾಲಾ ಮುಖ್ಯಸ್ಥರನ್ನು ಪ್ರಶ್ನಿಸಿದರೆ ಮೇಲಧಿಕಾರಿಗಳು ಯಾವುದೇ ಸೂಚನೆ ನೀಡಿಲ್ಲ ಎಂಬ ಉತ್ತರ ನೀಡುತ್ತಾರೆ. ಈ ಮೂಲಕ ಸರ್ಕಾರದ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಮೇಲಧಿಕಾರಿಗಳು ಈ ಕೂಡಲೇ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಪ್ರತಿ ಶಾಲೆಗಳಲ್ಲಿ ಸರ್ಕಾರದ ಉಲ್ಲೇಖ ಪತ್ರದ ಆದೇಶದಂತೆ ಶಾಲಾ ಮುಖ್ಯಸ್ಥರಿಗೆ ನಿರ್ದೇಶನ ನೀಡಬೇಕು. ಒಂದು ವೇಳೆ ಸೂಕ್ತ ಕ್ರಮ ಕೈಗೊಳ್ಳದೇ ಇದ್ದರೆ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.