ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ತುತ್ತಾದ ನಿರಾಶ್ರಿತರಿಗೆ ಪರಿಹಾರ ನೀಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಳಂಬ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ರೈತರು ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ನಗರದ ಹೃದಯ ಭಾಗವಾದ ಚೆನ್ನಮ್ಮ ವೃತ್ತದಲ್ಲಿ ನಡೆದಿರುವ ಬೃಹತ್ ಪ್ರತಿಭಟನೆಯಲ್ಲಿ ಸಂಪೂರ್ಣ ರಸ್ತೆ ಬಂದ್ ಮಾಡಲಾಗಿದೆ. ಸಾವಿರಾರು ಜನ ರೈತರು ಪಾಲ್ಗೊಂಡಿದ್ದು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ನಗರದ ಚೆನ್ನಮ್ಮ ವೃತ್ತದಲ್ಲಿ ಬಾರುಕೋಲ್ ಬೀಸುವ ಮೂಲಕ ಪ್ರತಿಭಟನೆ ನಡೆಸಿರುವ ರೈತರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಹೋರಾಟ ಮಾಡುತ್ತಿದ್ದಾರೆ.
ರೈತರ ಪೆಂಡಾಲ್ ತೆರವುಗೊಳಿಸಿದ ಜಿಲ್ಲಾಡಳಿತ ಕ್ರಮ ಖಂಡಿಸಿ ಪ್ರತಿಭಟನೆ...
ಡಿಸಿ ಕಚೇರಿ ಎದುರಿದ್ದ ರೈತರ ಪೆಂಡಾಲ್ ತೆರವುಗೊಳಿಸಿದ ಜಿಲ್ಲಾಡಳಿತದ ಕ್ರಮ ಖಂಡಿಸಿ ರೈತರು ಚೆನ್ನಮ್ಮ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದಿನ ಜಿಲ್ಲಾಧಿಕಾರಿ ಎನ್.ಜಯರಾಂ ರೈತರ ಪ್ರತಿಭಟನೆಗಾಗಿ ಡಿಸಿ ಕಚೇರಿ ಎದುರು ಪೆಂಡಾಲ್ ನಿರ್ಮಿಸಿ ಕೊಟ್ಟಿದ್ದರು. ಅದೇ ಪೆಂಡಾಲ್ನಲ್ಲಿ ರೈತರು ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಹಾಲಿ ಡಿಸಿ ಡಾ. ಎಸ್. ಬಿ.ಬೊಮ್ಮನಹಳ್ಳಿ ಪೆಂಡಾಲ್ ತೆರವುಗೊಳಿಸಿದ್ದಾರೆ.
ನೆರೆ ಸಂತ್ರಸ್ತರಿಗೆ ಪರಿಹಾರ ಬಿಡುಗಡೆಗೆ ಆಗ್ರಹಿಸಿ ರೈತರಿಂದು ಅಹೋರಾತ್ರಿ ಧರಣಿ ನಡೆಸಲು ನಿರ್ಧರಿಸಿದ್ದರು. ಇದರಲ್ಲಿ ಪಾಲ್ಗೊಳ್ಳಲು ಉತ್ತರ ಕರ್ನಾಟಕ ಭಾಗದ 10 ಜಿಲ್ಲೆಯ ಸಾವಿರಾರು ರೈತರು ಬೆಳಗಾವಿಗೆ ಆಗಮಿಸಿದ್ದರು.
ಅಹೋರಾತ್ರಿ ಧರಣಿ ನಡೆಸಲು ಪೆಂಡಾಲ್ ಇಲ್ಲದ ಕಾರಣ ರೈತರು ಚೆನ್ನಮ್ಮ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಆಕ್ರೋಶ ವ್ಯಕ್ತಪಡಿಸಿದರು. ಪೆಂಡಾಲ್ ಇಲ್ಲದೇ ಅಹೋರಾತ್ರಿ ಧರಣಿ ಎಲ್ಲಿ ನಡೆಸೋದು? ತಕ್ಷಣವೇ ಪೆಂಡಾಲ್ ನಿರ್ಮಿಸಿ ಕೊಡುವಂತೆ ರೈತರು ಡಿಸಿ ಅವರನ್ನು ಆಗ್ರಹಿಸಿದರು.