ಚಿಕ್ಕೋಡಿ (ಬೆಳಗಾವಿ) : ಅಥಣಿ ಸಮುದಾಯ ಆಸ್ಪತ್ರೆಯ ಸಿಬ್ಬಂದಿ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಸಾರ್ವಜನಿಕ ಆಸ್ಪತ್ರೆಯ ವೈದ್ಯರು, ಸಿಬ್ಬಂದಿ ಮತ್ತು ಆಶಾ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆರೋಪಿಯ ಬಂಧನಕ್ಕೆ ಆಗ್ರಹಿಸಿದರು. ಬುಧವಾರ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿರುವ ಸಮುದಾಯ ಆಸ್ಪತ್ರೆ ಮುಂದೆ ತಾಲೂಕಿನ ಸಮಸ್ತ ಸರ್ಕಾರಿ ವೈದ್ಯರು ಸಿಬ್ಬಂದಿ ಜೊತೆಯಾಗಿ ಅಥಣಿ ಸಮುದಾಯ ಆಸ್ಪತ್ರೆ ಎದುರು ಧರಣಿ ಸತ್ಯಾಗ್ರಹ ನಡೆಸಿದರು.
ಘಟನೆ ವಿವರ : ಮಂಗಳವಾರ ರಾತ್ರಿ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ ಎಂಬ ಕಾರಣಕ್ಕೆ ಅಥಣಿಯ ಸಮುದಾಯ ಆಸ್ಪತ್ರೆ ಸಿಬ್ಬಂದಿ ಬಸವರಾಜ ಘೂಳಪ್ಪನ್ನವರ ಎಂಬುವರಿಗೆ ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಕರ್ತವಲ್ಲಿದ್ದ ಸಿಬ್ಬಂದಿಗೆ ಈ ರೀತಿ ತೊಂದರೆ ಮಾಡಿದರೆ ಹೇಗೆ ಎಂದು ಪ್ರಶ್ನಿಸಿದರು. ಅಲ್ಲದೆ, ಆರೋಪಿ ವಿರುದ್ಧ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ವೇಳೆ ಏಕಾಏಕಿ ಬಂದು ಅವಾಚ್ಯ ಪದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ ಎಂದು ಹಲ್ಲೆಗೊಳಾದ ಬಸವರಾಜ ಘೂಳಪ್ಪನ್ನವರ ದೂರಿದ್ದಾರೆ.
ಅಥಣಿ ಸಮುದಾಯ ಆಸ್ಪತ್ರೆಯ ವೈದಾಧಿಕಾರಿ ಬಸವನಗೌಡ ಕಾಗೆ ಮಾತನಾಡಿ, ಕೊರೊನಾದಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಕೂಡ ನಾವು ನಮ್ಮ ಜೀವದ ಹಂಗು ತೊರೆದು ಕೆಲಸ ಮಾಡಿದ್ದೇವೆ. ಸಿಬ್ಬಂದಿ ಕೊರತೆ ನಡುವೆ ಸಮಯವನ್ನು ಲೆಕ್ಕಿಸದೆ ಕರ್ತವ್ಯ ಮಾಡುತ್ತಿರುವ ನಮ್ಮ ಸಿಬ್ಬಂದಿ ಮೇಲೆ ಈ ರೀತಿ ಏಕಾಏಕಿ ನಡೆದ ಹಲ್ಲೆಯನ್ನು ನಾವು ಖಂಡಿಸುತ್ತೇವೆ. ಸರ್ಕಾರಿ ವೈದ್ಯರ ಮೇಲೆ ಸಿಬ್ಬಂದಿ ಮೇಲೆ ಹಲ್ಲೆಗಳು ಆಗುತ್ತಿರುತ್ತವೆ. ಇದಕ್ಕೆಲ್ಲ ಕಡಿವಾಣ ಹಾಕಬೇಕಾದರೆ ಆರೋಪಿತರನ್ನು ಕೂಡಲೇ ಬಂಧನ ಮಾಡಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ : 48 ಗಂಟೆಯಲ್ಲಿ ಶ್ರೀಕಾಂತ್ ಪೂಜಾರಿ ಬಿಡುಗಡೆ ಆಗದಿದ್ರೆ ಹುಬ್ಬಳ್ಳಿ ಠಾಣೆ ಮುತ್ತಿಗೆ: ವಿಜಯೇಂದ್ರ ಎಚ್ಚರಿಕೆ