ಚಿಕ್ಕೋಡಿ(ಬೆಳಗಾವಿ): ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಇಂದು ಕುಡಚಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಹೇಂದ್ರ ತಮ್ಮಣ್ಣವರ್ ಪರ ಭರ್ಜರಿ ರೋಡ್ ಶೋ ನಡೆಸಿ ಮಾತ ಯಾಚಿಸಿದರು. ಹಾರುಗೇರಿ ಪಟ್ಟಣದ ಅಥಣಿ-ಗೋಕಾಕ್ ರಸ್ತೆಯಲ್ಲಿ ಇಪ್ಪತ್ತು ಸಾವಿರಕ್ಕೂ ಹೆಚ್ಚು ಕಾಂಗ್ರೆಸ್ ಕಾರ್ಯಕರ್ತರೊಂದಿಗೆ ಪ್ರಿಯಾಂಕಾ ರೋಡ್ ಶೋ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಬೆಲೆ ಏರಿಕೆ ಯಾರು ಮಾಡಿದ್ರು?, ರಾಜ್ಯವನ್ನು ಲೂಟಿ ಯಾರು ಮಾಡಿದರು? ಜಿಎಸ್ಟಿ ಹೇರಿ ನಿಮ್ಮ ದುಡ್ಡನ್ನು ಯಾರು ತೆಗೆದುಕೊಳ್ಳುತ್ತಿದ್ದಾರೆ? 40% ಪರ್ಸೆಂಟ್ ಸರ್ಕಾರ ಯಾರದ್ದು ಎಂದು ಪ್ರಿಯಾಂಕಾ ಗಾಂಧಿ ಪ್ರಶ್ನಿಸಿದರು. ಪ್ರಿಯಾಂಕಾ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಕಾರ್ಯಕರ್ತರು ಬಿಜೆಪಿ... ಬಿಜೆಪಿ... ಎಂದು ಕೂಗಿದರು. ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದ ಪ್ರಿಯಾಂಕಾ ಗಾಂಧಿ ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ ಘೋಷಿಸಿರುವ ಗ್ಯಾರಂಟಿಗಳನ್ನು ಅಧಿಕಾರಕ್ಕೆ ಬಂದ ತಕ್ಷಣ ನೂರಕ್ಕೆ ನೂರು ಜಾರಿಗೊಳಿಸಲಾಗುತ್ತದೆ. ಗೃಹಲಕ್ಷ್ಮೀ ಯೋಜನೆ ಮೂಲಕ ಗೃಹಿಣಿಯರಿಗಾಗಿ 2 ಸಾವಿರ ರೂ ನೀಡಲಾಗುತ್ತದೆ, ಪದವಿ ಪಡೆದ ನಿರುದ್ಯೋಗಿ ಯುವಕ - ಯುವತಿಯರಿಗೆ 3 ಸಾವಿರ ನಿರುದ್ಯೋಗ ಭತ್ಯೆ ನೀಡಲಾಗುತ್ತದೆ. ಡಿಪ್ಲೋಮಾ ಮಾಡಿದವರಿಗೆ 1500 ಸಾವಿರ ನೀಡ್ತಿವಿ, ಬಡವರಿಗೆ 200 ಯುನೀಟ್ ವಿದ್ಯುತ್ ಉಚಿತವಾಗಿ ಕೊಡ್ತಿವಿ, ಮಹಿಳೆಯರಿಗೆ ಉಚಿತ ಬಸ್ ಪಾಸ್ ಕೊಡ್ತೀವಿ ಎಂದು ಭರವಸೆ ನೀಡಿದರು.
ನೆನಪಿರಲಿ ಯುವ ನಿಧಿ, ಗೃಹಜ್ಯೋತಿ, ಭಾಗ್ಯಲಕ್ಷ್ಮೀ ಎಲ್ಲವನ್ನೂ ನಿಮಗೋಸ್ಕರ ಕಾಂಗ್ರೆಸ್ ತರ್ತಿದೆ. ಮಹೇಂದ್ರ ತಮ್ಮನ್ನವರಿಗಾಗಿ ಸತೀಶ್ ಜಾರಕಿಹೊಳಿಗಾಗಿ ಕರ್ನಾಟಕಕ್ಕಾಗಿ ಮತ ನೀಡಿ. ನಿಮಗೋಸ್ಕರ ಶ್ರಮಿಸುವ ಸರ್ಕಾರವನ್ನು ಆರಿಸಿ ತನ್ನಿ, ನಾವು ಲೂಟಿ ಮಾಡಲ್ಲ, ನಿಮ್ಮ ಭವಿಷ್ಯನ್ನು ಕಟ್ಟುವ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡಿ ಎಂದು ಜನರಲ್ಲಿ ಮನವಿ ಮಾಡಿದರು.
45 ವರ್ಷದ ನಂತರ ಗಾಂಧಿ ಕುಟುಂಬಸ್ಥರ ಭೇಟಿ: ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು 1978ರಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರಕ್ಕೆ ಹಾರುಗೇರಿ ಪಟ್ಟಣಕ್ಕೆ ಭೇಟಿ ನೀಡಿದ್ದರು. ಇವತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಹಾರುಗೇರಿ ಗ್ರಾಮಕ್ಕೆ ಭೇಟಿ ನೀಡಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಿದರು.
ಇದನ್ನೂ ಓದಿ:ಬಿಜೆಪಿ ಶ್ರೀಮಂತರ ಪರ, ಬಡವರಿಗೆ ಯೋಜನೆ ತಂದ್ರೆ ಪ್ರಶ್ನಿಸ್ತಾರೆ: ಮಲ್ಲಿಕಾರ್ಜುನ ಖರ್ಗೆ