ಬೆಳಗಾವಿ: ಅಕ್ಟೋಬರ್ 19ರಿಂದ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಯಾವುದೇ ಅನಾಹುತ ಆಗದಂತೆ ಜಿಲ್ಲಾಡಳಿತ ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್.ಬಿ ಬೊಮ್ಮನಹಳ್ಳಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಎನ್ಡಿಆರ್ಎಫ್ ತಂಡ, ಒಂದು ಎಸ್ಡಿಆರ್ಎಫ್ ತಂಡ ಹಾಗೂ ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿ ಜತೆ ಸಜ್ಜಾಗಿದ್ದೇವೆ. ಮಲಪ್ರಭಾ, ಕೃಷ್ಣಾ ನದಿಗಳು ತುಂಬಿ ಹರಿಯುತ್ತಿದ್ದು, ಸದ್ಯ ನದಿಗಳ ಒಳ ಹರಿವು ಕಡಿಮೆಯಾಗಿದೆ. ರಾಮದುರ್ಗ, ಬೈಲಹೊಂಗಲ ತಾಲೂಕಿನ ಹಲವು ಗ್ರಾಮಗಳು ಜಲಾವೃತವಾಗಿದೆ. ಅಂತಹ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಸರ್ಕಾರ ಕೇಂದ್ರಗಳನ್ನು ಪ್ರಾರಂಭಿಸಿದೆ ಎಂದರು.
ಗೋಕಾಕ ಬಂಡೆ ತೆರವುಗೊಳಿಸುವ ಕೆಲಸ ನಡೆಯುತ್ತಿದ್ದು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಇನ್ನಿತರ ಇಲಾಖೆಯ ಅಧಿಕಾರಿಗಳಿಂದ ಬಂಡೆ ತೆರವು ಕಾರ್ಯ ಕೈಗೊಂಡಿದ್ದಾರೆ. ಗುಡ್ಡದ ಕೆಳಗೆ ವಾಸವಾಗಿರುವ ನಿವಾಸಿಗಳನ್ನು ಬೇರೆಡೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದರು.