ಚಿಕ್ಕೋಡಿ: ಕೊಲೆ ಆರೋಪದಲ್ಲಿ ಜೈಲಿಗೆ ಹೋದವರು ಅಪರಾಧಿ ಅಥವಾ ನಿರಪರಾಧಿ ಎಂಬುದು ಸಾಬೀತಾಗುವ ಮೊದಲೇ ಅವರನ್ನು ಬೆಂಬಲಿಸುವುದು ಸರಿಯಲ್ಲ ಎಂದು ಶ್ರೀರಾಮ ಸೇನಾ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್, ಪಂಚಮಸಾಲಿ ಸ್ವಾಮೀಜಿ ಹೇಳಿಕೆಯನ್ನು ಖಂಡಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಖಾವಿ ಬಟ್ಟೆ ಹಾಕಿದ ನೀವು ಒಂದು ಜಾತಿಗೆ ಸಿಮೀತವಲ್ಲ. ಅರೆಸ್ಟ್ ಆದ ತಕ್ಷಣ ಬೆಂಬಲ ನೀಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುತ್ತದೆ. ಪಂಚಮಸಾಲಿ ಸ್ವಾಮೀಜಿ ಈ ರೀತಿ ಪ್ರತಿಕ್ರಿಯೆ ಮಾಡಬಾರದು. ಜಿಪಂ ಸದಸ್ಯನ ಕೊಲೆ ಪ್ರಕರಣದಲ್ಲಿ ಸಚಿವ ವಿನಯ್ ಕುಲಕರ್ಣಿ ಪಾತ್ರದ ಬಗ್ಗೆ ಸಂಶಯ ಇರುವ ಕಾರಣ ಪೊಲೀಸರು ಬಂಧಿಸಿದ್ದಾರೆ. ವಿನಯ್ ಕುಲಕರ್ಣಿ ಅವರ ಪರವಾಗಿ ನಿಂತಿದ್ದು ನಿಮ್ಮ ಮಠದ ಶೋಭೆಯಲ್ಲವೆಂದು ಸ್ವಾಮೀಜಿ ನಡೆಗೆ ಪ್ರಮೋದ್ ಮುತಾಲಿಕ್ ಬೇಸರ ವ್ಯಕ್ತಪಡಿಸಿದರು.
ದೀಪಾವಳಿ ಹಬ್ಬಕ್ಕೆ ಪಟಾಕಿ ನಿಷೇಧ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ದೀಪಾವಳಿ ಸಂದರ್ಭದಲ್ಲಿ ಪಟಾಕಿ ಬ್ಯಾನ್ ಮಾಡಬೇಕು ಅನ್ನೋದು ಸರಿಯಲ್ಲ. ಪಟಾಕಿಯಿಂದ ಪರಿಸರ ಮಾಲಿನ್ಯ ಆಗುತ್ತೆ ಎಂಬುದು ಸುಳ್ಳು. ದೀಪಾವಳಿ ಸಮಯದಲ್ಲಿ ಪಟಾಕಿ ಹಾರಿಸದರೆ ತೊಂದರೆಯಿಲ್ಲ. ಧಾರ್ಮಿಕ ವಿಧಿ ವಿಧಾನದಿಂದ ನಡೆಯುವ ಕಾರಣ ಪಟಾಕಿಯನ್ನು ಬ್ಯಾನ್ ಮಾಡಬಾರದು ಎಂದರು.