ಅಥಣಿ (ಬೆಳಗಾವಿ): ಕಬ್ಬಿನ ಬಾಕಿ ಮೊತ್ತ ನೀಡದ ಕಾರ್ಖಾನೆ ಕ್ರಮ ಖಂಡಿಸಿ ಎಂಕೆ ಹುಬ್ಬಳ್ಳಿ ರೈತನೊಬ್ಬ ಜೀವಂತ ಸಮಾಧಿಗೆ ಮುಂದಾಗಿರುವುದನ್ನು ಖಂಡಿಸಿ ಪ್ರಜಾ ಪರಿವರ್ತನೆ ಫೌಂಡೇಶನ್ ವತಿಯಿಂದ ಬೆಳಗಾವಿ ಜಿಲ್ಲಾಧಿಕಾರಿಗೆ ಅಥಣಿ ಉಪ ತಹಶೀಲ್ದಾರ್ ರಾಜು ಬುರ್ಲಿ ಅವರ ಮೂಲಕ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಮಾತನಾಡಿದ ದೀಪಕ್ ಬುರ್ಲಿ, ಉತ್ತರ ಕರ್ನಾಟಕದ ಭಾಗದಲ್ಲಿ ಕಬ್ಬು ಬೆಳೆದ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ. ಕೇಂದ್ರ ಸರ್ಕಾರ ಕಾರ್ಖಾನೆಗಳಿಗೆ ಹದಿನಾಲ್ಕು ದಿನದಲ್ಲಿ ರೈತರಿಗೆ ಕಬ್ಬಿನ ಬಿಲ್ ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿತ್ತು. ಆದರೆ ಕಾರ್ಖಾನೆಗಳು ರೈತರನ್ನು ಇನ್ನೂ ಸತಾಯಿಸುತ್ತಿದ್ದಾರೆ. ಜಿಲ್ಲಾಧಿಕಾರಿಗಳು ನಿರ್ದಾಕ್ಷಿಣ್ಯವಾಗಿ ಕಾರ್ಖಾನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
2020-21ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಆರಂಭವಾಗುವುದರಿಂದ ಕಾರ್ಖಾನೆಗಳು ಕಬ್ಬಿಗೆ ದರವನ್ನು ಘೋಷಣೆ ಮಾಡಬೇಕು. ಎಂಕೆ ಹುಬ್ಬಳ್ಳಿ ಶಿವಾನಂದ ಗೋಗಾರಗೆ ಮಾಡಿದಂತಹ ಘಟನೆ ಪುನರಾವರ್ತನೆ ಆಗದಂತೆ ಜಿಲ್ಲಾಡಳಿತ ಈ ಕ್ಷಣದಿಂದ ಎಚ್ಚರವಹಿಸಿ ಕಬ್ಬು ಬೆಳೆಗಾರರಿಗೆ ನ್ಯಾಯ ಒದಗಿಸಿಕೊಡುವಂತೆ ಮನವಿ ಮಾಡಿಕೊಂಡರು.