ಬೆಳಗಾವಿ: ಯೋಧನ ಕುಟುಂಬಕ್ಕೆ ಬಹಿಷ್ಕಾರ ಹಾಕಿದಕ್ಕೆ ಗ್ರಾಮಸ್ಥರ ಜತೆಗೆ ತಹಶೀಲ್ದಾರ್ ಗಿರೀಶ ಸ್ವಾದಿ ನಡೆಸಿದ ಸಂಧಾನ ಸಭೆ ಮುಂದೂಡಲಾಗಿದೆ.
ರಾಮದುರ್ಗ ತಾಲೂಕಿನ ತೋಟಗಟ್ಟಿ ಗ್ರಾಮದ ಯೋಧ ವಿಠ್ಠಲ ಕಡಕೋಳ ಅವರ ಕುಟುಂಬಕ್ಕೆ ಕ್ಷುಲ್ಲಕ ಕಾರಣಕ್ಕೆ ಗ್ರಾಮಸ್ಥರು ಸಾಮಾಜಿಕ ಬಹಿಷ್ಕಾರ ಹಾಕಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಇಂದು ಗ್ರಾಮಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಯೋಧನ ಕುಟುಂಬ ಸದಸ್ಯರ ಜತೆಗೆ ಚರ್ಚೆ ನಡೆಸಿದರು. ಬಳಿಕ ಗ್ರಾಮದ ಸಿದ್ಧಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಯೋಧನ ಕುಟುಂಬ ಸದಸ್ಯರು ಹಾಗೂ ಗ್ರಾಮದ ಮುಖಂಡರ ಜತೆಗೆ ಸಭೆ ನಡೆಸಿದರು.
ಗ್ರಾಮದ ಕೆಲವು ಮುಖಂಡರು ಬಾರದ ಹಿನ್ನೆಲೆಯಲ್ಲಿ ಸಭೆ ಮತ್ತೊಂದು ದಿನ ಕರೆಯುವಂತೆ ಗ್ರಾಮಸ್ಥರು ಮನವಿ ಮಾಡಿಕೊಂಡರು. ಊರಿನ ಎಲ್ಲ ಮುಖಂಡರು ಸೇರಿ ಚರ್ಚೆ ಮಾಡಿ ಸಂಧಾನ ಸಭೆ ಮಾಡುವಂತೆ ಕೆಲ ಮುಖಂಡರು ಆಗ್ರಹಿಸಿದರು. ಗ್ರಾಮಸ್ಥರ ಮನವಿ ಮೇರೆಗೆ ಸಭೆಯನ್ನು ತಹಶೀಲ್ದಾರ್ ಮುಂದಿನ ವಾರಕ್ಕೆ ಮುಂದೂಡಿದರು. ಸಭೆಯಲ್ಲಿ ಯಾವುದೇ ತೀರ್ಮಾನಕ್ಕೆ ಬಾರದ ಹಿನ್ನೆಲೆಯಲ್ಲಿ ಯೋಧನ ಕುಟುಂಬಸ್ಥರು ಮನೆಗೆ ಹಿಂತಿರುಗಿದರು.