ಬೆಳಗಾವಿ: ಲೋಕಸಭೆ ಉಪಚುನಾವಣೆ ಯಾವಾಗ ಬೇಕಾದರೂ ಘೋಷಣೆ ಆಗಬಹುದು. ಉಪಚುನಾವಣೆ ಎದುರಿಸಲು ನಾವು ಸನ್ನದ್ಧರಾಗಿದ್ದೇವೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ. ಸಂಜೀವಕುಮಾರ್ ಹೇಳಿದ್ದಾರೆ.
ಬೆಳಗಾವಿಯ ಡಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬೆಳಗಾವಿ ಲೋಕಸಭೆ ಉಪಚುನಾವಣೆ ಯಾವಾಗ ಘೋಷಣೆ ಆಗುತ್ತೆ ಅಂತ ನಾವು ಹೇಳಕ್ಕಾಗಲ್ಲ. ಕೋವಿಡ್ ಹಿನ್ನೆಲೆ ಶಿರಾ, ಆರ್.ಆರ್. ನಗರ ಉಪಚುನಾವಣೆಯಲ್ಲಿ ವಿಶೇಷ ಸೌಲಭ್ಯ ನೀಡಲಾಗಿತ್ತು. ಆ ಸೌಲಭ್ಯ ಮುಂದೆ ನಡೆಯಲಿರುವ ಉಪಚುನಾವಣೆಯಲ್ಲಿ ಮುಂದುವರೆಸಲು ನಿರ್ಧರಿಸಲಾಗಿದೆ. ದಿವ್ಯಾಂಗ ಮತದಾರರು, 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಹಾಗೂ ಕೋವಿಡ್ ಸೋಂಕಿತರಿಗೆ ಪೋಸ್ಟಲ್ ಬ್ಯಾಲೆಟ್ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಓದಿ: ಪೊಲೀಸರ ದಾಳಿಗೆ ಬೆಚ್ಚಿ ನದಿಗೆ ಹಾರಿದ್ದ ಪ್ರಕರಣ: ಇಬ್ಬರ ಮೃತ ದೇಹ ಪತ್ತೆ
ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 38,57,982 ಮತದಾರರು ಇದ್ದಾರೆ. 19,52,160 ಪುರುಷ, 19,00,822 ಮಹಿಳಾ ಮತದಾರರು ಇದ್ದಾರೆ. 19,836 ಸೇವಾ ಮತದಾರರು, ಇದರಲ್ಲಿ 354 ಮಹಿಳಾ ಮತದಾರರಿದ್ದಾರೆ. ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ? ಇಲ್ಲವೋ ಎಂಬುವುದನ್ನು ಸಾರ್ವಜನಿಕರು ಚೆಕ್ ಮಾಡಿಕೊಳ್ಳಬೇಕು. ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದಿದ್ರೆ ಈಗಲೂ ನೋಂದಾಯಿಸಲು ಅವಕಾಶ ಇದೆ. ಉಪಚುನಾವಣೆ ಘೋಷಣೆ ಆದ ಬಳಿಕ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸಲು ಅವಕಾಶ ಇಲ್ಲ. ಬೆಳಗಾವಿ ಜಿಲ್ಲೆಯಲ್ಲಿ ಇರುವ ದಿವ್ಯಾಂಗರು ತಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ನೋಂದಾಯಿಸಬೇಕು ಎಂದು ಮನವಿ ಮಾಡಿದ ಅವರು, ಚುನಾವಣಾ ಅಕ್ರಮ ತಡೆಯಲು ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ ಎಂದರು.