ಚಿಕ್ಕೋಡಿ: ಇಲ್ಲಿನ ಪೊಲೀಸ್ ಸಬ್ಇನ್ಸ್ಪೆಕ್ಟರ್ ಮೇಲೆ ದಬ್ಬಾಳಿಕೆಯ ಆರೋಪ ಕೇಳಿಬಂದಿದೆ. ಶಿಕ್ಷಕರೊಬ್ಬರ ಕೊರಳಪಟ್ಟಿ ಹಿಡಿದು ನಡುರಸ್ತೆಯಲ್ಲೇ ಸಾರ್ವಜನಿಕವಾಗಿ ಎಳೆದೊಯ್ಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ಆಕ್ರೋಶ ಹೊರಹಾಕಿದ್ದಾರೆ.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಘಟನೆ ನಡೆದಿದ್ದು, ಮುಗಳಖೋಡ ಪಟ್ಟಣದ ನಿವಾಸಿ ಸರ್ಕಾರಿ ಶಾಲೆಯ ಶಿಕ್ಷಕ ಚಂದ್ರು ಲಮಾಣಿ ಎಂಬುವವರ ಮೇಲೆ ಪೊಲೀಸರು ದರ್ಪತೋರಿಸಿದ್ದಾರೆ ಎನ್ನಲಾಗಿದೆ. ಹಾರೋಗೇರಿಯ ಸಬ್ ಇನ್ಸ್ಪೆಕ್ಟರ್ ರಾಘವೇಂದ್ರ ಖೋತ ಎಂಬುವವರು ಶಿಕ್ಷಕನ ಶರ್ಟ್ ಪಟ್ಟಿ ಹಿಡಿದು ರಸ್ತೆಯಲ್ಲೇ ಎಳೆದುಕೊಂಡು ಹೋಗಿದ್ದಾರೆ. ಶಿಕ್ಷಕನನ್ನು ಎಳೆದೊಯ್ಯುವಾಗ ಜನರು ಮತ್ತು ಮಹಿಳೆಯರು ಪೊಲೀಸ್ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಘಟನೆಗೆ ಕಾರಣ: ಮುಗಳಖೋಡ ಪಟ್ಟಣದಲ್ಲಿ ದೇವಸ್ಥಾನದ ಖಾಲಿ ಜಾಗದಲ್ಲಿ ಕಾಂಪೌಂಡ್ ನಿರ್ಮಾಣ ಮಾಡಲಾಗುತ್ತಿದೆ. ದೇವಸ್ಥಾನಕ್ಕೆ ಕಾಂಪೌಂಡ್ ಮಾಡುತ್ತಿರುವ ಜಾಗ ತಮಗೆ ಸೇರಿದ್ದು, ಸೂಕ್ತ ತನಿಖೆ ನಡೆಸಿ ಕಾಮಗಾರಿ ಆರಂಭಿಸುವಂತೆ ಚಂದ್ರು ಲಮಾನಿ ಈಗಾಗಲೇ ಪಿಡಬ್ಲೂಡಿ ಇಲಾಖೆ ಸಹಾಯಕ ಇಂಜಿನಿಯರ್ಗೆ ಪತ್ರ ಬರೆದಿದ್ದಾರಂತೆ. ಆದಾಗ್ಯೂ ಪೊಲೀಸರ ಸಮ್ಮುಖದಲ್ಲಿ ಕಾಮಗಾರಿ ಪ್ರಾರಂಭ ಮಾಡಿದ್ದಕ್ಕೆ ಪೊಲೀಸರು ಹಾಗೂ ಚಂದ್ರು ಕುಟುಂಬಸ್ಥರ ನಡುವೆ ವಾಗ್ವಾದ ನಡೆದಿದ್ದು, ಈ ವೇಳೆ ಪಿಎಸ್ಐ ಶಿಕ್ಷಕನ ಮೇಲೆ ದರ್ಪ ತೋರಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಗೆಜೆಟೆಡ್ ಪ್ರೊಬೇಷನರಿ ನೇಮಕಾತಿಯಲ್ಲಿ ಅಕ್ರಮ ಆರೋಪ: ಅಭ್ಯರ್ಥಿಯಿಂದ ಸಿಎಂಗೆ ಪತ್ರ