ಬೆಳಗಾವಿ: ಮಹಾನಗರದ ಪ್ರತಿಷ್ಠಿತ ಎಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತು ಪೂರೈಸಿ ಕಿಕ್ ಏರಿಸುತ್ತಿದ್ದ ಎಂಟು ಜನರ ಖತರ್ನಾಕ್ ಗ್ಯಾಂಗ್ ಇದೀಗ ಮಹಾನಗರದ ಪೊಲೀಸರ ಖೆಡ್ಡಾಕ್ಕೆ ಬಿದ್ದಿದೆ.
ಬಂಧಿತರಿಂದ ಸಾವಿರಾರು ಮೌಲ್ಯದ ಪನ್ನಿ ಚೀಟಿ, ಗಾಂಜಾ, ನಗದು ಹಾಗೂ ಬೈಕ್ ವಶಪಡಿಸಿಕೊಳ್ಳಲಾಗಿದೆ. ಮಹಾರಾಷ್ಟ್ರದಿಂದ ಗಾಂಜಾ ಹಾಗೂ ಪನ್ನಿ ತಂದು ಕಾಲೇಜಿನ ವಿದ್ಯಾರ್ಥಿಗಳಿಗೆ ಪೂರೈಸಲಾಗುತ್ತಿತ್ತು. ಜಮ್ಮು-ಕಾಶ್ಮೀರ ಮೂಲದ ಬೆಳಗಾವಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಮೀರ್ ಅಬ್ದುಲ್ ಲತೀಫ್ ಬೇಗ್ ಮೂಲಕ ಈ ಗ್ಯಾಂಗ್ ಪನ್ನಿ ಪೂರೈಸುತ್ತಿತ್ತು.
ಪ್ರಕರಣದಡಿ ಮಧ್ಯಪ್ರದೇಶ, ಮಹಾರಾಷ್ಟ್ರದಿಂದ ಮಾದಕ ವಸ್ತು ತರುತ್ತಿದ್ದ ಲಾರಿ ಚಾಲಕ ಅಖಿಲ್ ಅಹ್ಮದ್ ಮುನವಳ್ಳಿ, ಆತೀಫ್ ಚಚಡಿ, ಸೂರಜ್ ಅಗಸರ್, ಅಮೀರ್ ಬೇಗ್ನನ್ನು ಮಾಳಮಾರುತಿ ಪೊಲೀಸರು ಬಂಧಿಸಿದ್ದಾರೆ.
ಇನ್ನು ದೂರಿನ ಆಧಾರದಲ್ಲಿ ದಾಳಿ ನಡೆಸಿದ ಪೊಲೀಸರು, ಅನಿಕೇಶ ಮಧುಮತ್ತ, ಸಮೀರ್ ದೇಸಾಯಿ, ರಾಮಚಂದ್ರ ಪವಾರ್ ಸೇರಿದಂತೆ ಒಟ್ಟು 8 ಜನರನ್ನು ಬಂಧಿಸಿದ್ದಾರೆ. ಪ್ರಕರಣದಲ್ಲಿ 22 ಸಾವಿರ ಮೌಲ್ಯದ 2.2 ಕೆಜಿ ಗಾಂಜಾ, 25 ಸಾವಿರ ಮೌಲ್ಯದ ಪನ್ನಿ ಚೀಟಿ, 30 ಸಾವಿರ ಮೌಲ್ಯದ ಬೈಕ್ ಹಾಗೂ ನಗದು ವಶಪಡಿಸಿಕೊಂಡಿದ್ದಾರೆ.
ಯಶಸ್ವಿ ದಾಳಿ ನಡೆಸಿದ ಮಾಳಮಾರುತಿ ಹಾಗೂ ಮಾರ್ಕೆಟ್ ಠಾಣೆಯ ಪೊಲೀಸರಿಗೆ 25 ಸಾವಿರ ನಗದು ಬಹುಮಾನ ನೀಡುವುದಾಗಿ ಪೊಲೀಸ್ ಆಯುಕ್ತ ಲೋಕೇಶ ಕುಮಾರ್ ತಿಳಿಸಿದರು.