ಬೆಳಗಾವಿ: ಪ್ರತಿ ಟನ್ ಕಬ್ಬಿಗೆ 5,500 ರೂ. ನೀಡುವಂತೆ ಆಗ್ರಹಿಸಿ ಇಂದು ರೈತರಿಂದ ಸುವರ್ಣ ಸೌಧ ಮುತ್ತಿಗೆ ಹಿನ್ನೆಲೆ ಭಾನುವಾರ ರಾತ್ರೋರಾತ್ರಿ ಮನೆಯಲ್ಲಿ ಮಲಗಿದ್ದ ರೈತ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಪೊಲೀಸರ ನಡೆಗೆ ಸರ್ಕಾರದ ವಿರುದ್ಧ ರೈತರು ಅಸಮಾಧಾನ ಹೊರಹಾಕಿದ್ದಾರೆ. ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆ ಮುಂಭಾಗದಲ್ಲಿ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ ನೂಕಾಟ ನಡೆಯಿತು. ರೈತ ಮುಖಂಡ ಚೂನಪ್ಪ ಪೂಜಾರಿ ಸೇರಿ ಮೂವರನ್ನು ಬಿಡುವಂತೆ ಪೊಲೀಸ್ ಠಾಣೆ ಮುಂಭಾಗದಲ್ಲೇ ಧರಣಿ ಕುಳಿತು ಸರ್ಕಾರದ ವಿರುದ್ಧ ಅನ್ನದಾತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿ ಮಾತ್ರವಲ್ಲದೆ ಬೇರೆ ಕಡೆಯೂ ಎಂಟಕ್ಕೂ ಅಧಿಕ ರೈತ ಮುಖಂಡರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಕೃಷಿ ಇಲಾಖೆ ಪ್ರಕಾರವೇ ಕಬ್ಬು ಉತ್ಪಾದನಾ ವೆಚ್ಚ 3,200 ರೂ. ಎಂದು ಅಂದಾಜಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಹತ್ತು ಇಳುವರಿಗೆ ಬರುವ ಕಬ್ಬಿಗೆ 2,900 ನಿಗದಿ ಮಾಡಿರುವುದು ಅವೈಜ್ಞಾನಿಕ. ಅದ್ದರಿಂದ ಕಬ್ಬಿನ ಎಫ್ಆರ್ಪಿ ದರ ಪುನರ್ ಪರಿಶೀಲಿಸಬೇಕೆಂದು ಒತ್ತಾಯಿಸಿ ರಾಜ್ಯದ ಕಬ್ಬು ಬೆಳೆಗಾರರು ಕಳೆದ ಒಂದು ತಿಂಗಳಿನಿಂದ ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ, ಉರುಳು ಸೇವೆ ಮಾಡಿ, ವಾಹನಗಳನ್ನು ತಡೆದು, ಅಣಕು ಶವಯಾತ್ರೆ ಮಾಡಿ ಸರ್ಕಾರದ ನಿರ್ಲಕ್ಷ್ಯ ನೀತಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ಎರಡು ವರ್ಷದಿಂದ ಕೇಂದ್ರ ಸರ್ಕಾರ ಎಫ್ಆರ್ಪಿ ದರ ಏರಿಕೆ ಮಾಡದೇ 21-22 ನೇ ಸಾಲಿಗೆ ಕೇವಲ ಕ್ವಿಂಟಲ್ಗೆ 5 ರೂ ಏರಿಕೆ ಮಾಡಿ, ಸಕ್ಕರ ಕಂಪನಿಗಳ ಒತ್ತಡಕ್ಕೆ ಮಣಿದು ಕಬ್ಬು ಬೆಳೆಗಾರರಿಗೆ ಅನ್ಯಾಯ ಮಾಡ್ತಿದೆ. ಕಬ್ಬಿನ ಉತ್ಪಾದನೆ ವೆಚ್ಚ, ಸಾಗಣಿಕೆದಾರ, ಕಟಾವ್ ಕೂಲಿ, ರಸಗೊಬ್ಬರ, ಬೀಜ, ಕೃಷಿ ಕಾರ್ಮಿಕರ ಕೂಲಿ ದುಪ್ಪಟ್ಟು ಏರಿಕೆಯಾಗಿದೆ. ಕೃಷಿ ಇಲಾಖೆ ಪ್ರಕಾರವೇ ಕಬ್ಬು ಉತ್ಪಾದನಾ ವೆಚ್ಚ 3,200 ರೂ. ಎಂದು ಅಂದಾಜಿಸಲಾಗಿದೆ. ಆದರೆ ಕೇಂದ್ರ ಸರ್ಕಾರ ಇಳುವರಿ ಬರುವ ಕಬ್ಬಿಗೆ 2900 ನಿಗದಿ ಮಾಡಿರುವುದು ಅವೈಜ್ಞಾನಿಕ ಎಂದು ರೈತರು ವಿರೋಧಿಸಿದ್ದಾರೆ.
ರಾಜ್ಯದಲ್ಲಿ 30 ಲಕ್ಷ ಕಬ್ಬು ಬೆಳೆಗಾರರು 7.50 ಕೋಟಿ ಟನ್ ಕಬ್ಬು ಬೆಳೆದು 78 ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ನೀಡಿದ್ದಾರೆ. ಕಬ್ಬು ಬೆಳೆದ ರೈತರು ಭಿಕ್ಷುಕರಾಗುತ್ತಿದ್ದಾರೆ. ರೈತರ ಮತ ಭಿಕ್ಷೆ ಬೇಡುವ ಸರ್ಕಾರ, ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿದೆ. ವರ್ಷದಲ್ಲಿ 30,000 ಕೋಟಿ ವಹಿವಾಟಿನಲ್ಲಿ ರಾಜ್ಯ ಸರ್ಕಾರಕ್ಕೆ 5000 ಕೋಟಿ ತೆರಿಗೆ ಬರುತ್ತಿದೆ. ಆದರೂ ನಿರ್ಲಕ್ಷ್ಯ ತೋರಲಾಗುತ್ತಿದೆ ಎಂದು ಭಿಕ್ಷೆ ತಟ್ಟೆ ಹಿಡಿದು ಬೆಂಗಳೂರಿನಲ್ಲಿ ಕಬ್ಬು ಬೆಳಗಾರರು ಪ್ರತಿಭಟನೆ ನಡೆಸಿದ್ದರು.
ಸಕ್ಕರೆ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಹಾಗೂ ಕೃಷಿ ಸಚಿವ ಬಿ.ಸಿ. ಪಾಟೀಲ್ ನಿರಂತರವಾಗಿ ಬೇರೆ ಬೇರೆ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಮನವೊಲಿಸುವ ಪ್ರಯತ್ನವನ್ನೂ ಮಾಡಿದ್ದರು. ಆಶ್ವಾಸನೆ ಮಾತ್ರ ನೀಡಿದ್ದ ಸರ್ಕಾರದ ನಡೆಗೆ ಆಕ್ರೋಶಗೊಂಡಿದ್ದ ರೈತರು ಕಳೆದ ಒಂದು ತಿಂಗಳಿನಿಂದ ಅಹೋರಾತ್ರಿ ಧರಣಿ ಕೈಗೊಂಡಿದ್ದರು.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಕಬ್ಬಿನ ದರ ಏರಿಕೆ ಮಾಡುವಂತೆ ಒತ್ತಾಯಿಸಿ ರೈತರು ನಡೆಸುತ್ತಿದ್ದ ಧರಣಿ ವೇಳೆ ಡಿ. 18ರಂದು ಧರಣಿಯಲ್ಲಿ ಮಾತನಾಡಿದ್ದ ರಾಜ್ಯ ಕಬ್ಬು ಬೆಳಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರ್ ಶಾಂತಕುಮಾರ್, ಡಿ 23ರ ರೈತ ದಿನಾಚರಣೆಯ ಒಳಗೆ ಕಬ್ಬಿನ ದರ ಏರಿಕೆಯ ಬಗ್ಗೆ ನಿರ್ಧಾರವಾಗದಿದ್ದರೆ ಇಂದು(ಡಿ 26ರಂದು) ಚಳಿಗಾಲದ ಅಧಿವೇಶನ ನಡೆಯುತ್ತಿರುವ ಬೆಳಗಾವಿಯ ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.
ಈಗಾಗಲೇ ಕಬ್ಬಿನ ಎಫ್ಆರ್ಪಿ ದರ ಏರಿಕೆ, ಕಟಾವು ಕೂಲಿ ಹಾಗೂ ಸಾಗಣೆ ವೆಚ್ಚ ಕಡಿತ ಮಾಡುವ ಬಗ್ಗೆ ಒಪ್ಪಿಕೊಂಡಿರುವ ಮುಖ್ಯಮಂತ್ರಿಗಳು ರೈತ ದಿನಾಚರಣೆಯ ಮುಂದು ಅಧಿವೇಶನದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬೇಕು. ಒಂದು ವೇಳೆ ರೈತರ ಬೇಡಿಕೆಯ ಬಗ್ಗೆ ನಿರ್ಲಕ್ಷ್ಯ ತೋರಿದರೆ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದು ಖಂಡಿತ ಎಂದು ಹೇಳಿದ್ದರು.
ಇದನ್ನೂ ಓದಿ: ಕಬ್ಬಿನ ದರ ಏರಿಕೆ ಬಗ್ಗೆ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ ಸುವರ್ಣಸೌಧಕ್ಕೆ ಮುತ್ತಿಗೆ: ಕುರುಬೂರ್ ಶಾಂತಕುಮಾರ್