ಬೆಳಗಾವಿ: ರೈತ ವಿರೋಧಿ ಮಸೂದೆ ಹಿಂಪಡೆಯುವಂತೆ ಆಗ್ರಹಿಸಿ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಗರದ ಕಿತ್ತೂರು ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ಹಾಗೂ ಹೋರಾಟಗಾರರ ಮಧ್ಯೆ ತಳ್ಳಾಟ-ನೂಕಾಟ ನಡೆದಿದೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ನಗರದ ಚೆನ್ನಮ್ಮ ವೃತ್ತದಲ್ಲಿ ಟೈಯರ್‌ಗೆ ಬೆಂಕಿ ಹಚ್ಚಲು ಹೋರಾಟಗಾರರು ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ಹಾಗೂ ಪ್ರತಿಭಟನಾಕಾರರ ಮಧ್ಯೆ ವಾಗ್ವಾದ ನಡೆದಿದೆ. ಟೈಯರ್‌ಗೆ ಬೆಂಕಿ ಹಚ್ಚಲು ಪೊಲೀಸರು ಅವಕಾಶ ನಿರಾಕರಿಸಿದ್ದಾರೆ. ಈ ವೇಳೆ ಟೈಯರ್ ವಿಚಾರದಲ್ಲಿ ಪೊಲೀಸರು, ಪ್ರತಿಭಟನಾಕಾರರ ನಡುವೆ ತಳ್ಳಾಟ, ನೂಕಾಟ ಉಂಟಾಗಿದೆ.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಕನ್ನಡಪರ ಸಂಘಟನೆ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿಭಟನಾ ನಿರತರಿಂದ ಟೈಯರ್ ಕಿತ್ತುಕೊಳ್ಳಲು ಹೋಗಿ ಪೊಲೀಸ್ ಕಾನ್ಸ್ ಸ್ಟೇಬಲ್ ನೆಲಕ್ಕೆ ಬಿದ್ದರು. ಕಡೆಗೂ ಹರಸಾಹಸ ಮಾಡಿ ಹೋರಾಟಗಾರರಿಂದ ಪೊಲೀಸರು ಟೈಯರ್ ಕಿತ್ತುಕೊಂಡರು.