ಬೆಳಗಾವಿ: ಅಗ್ನಿಪಥ್ ಯೋಜನೆ ಸಂಬಂಧ ಬೆಳಗಾವಿ ಬಂದ್‍ಗೆ ಯಾವುದೇ ರೀತಿ ಅನುಮತಿ ಇಲ್ಲ. ಅನುಮತಿ ಇಲ್ಲದೇ ಪ್ರತಿಭಟನೆಯಲ್ಲಿ ಭಾಗಿಯಾದ್ರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ. ಬಿ ಬೋರಲಿಂಗಯ್ಯ ಎಚ್ಚರಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಗ್ನಿಪಥ್ ಯೋಜನೆ ಸಂಬಂಧ ನಾಳೆ ಬೆಳಗಾವಿ ಚಲೋ ಹಾಗೂ ಬೆಳಗಾವಿ ಬಂದ್ ಮಾಡಲು ಹೊರಟಿದ್ದಾರೆ. ಅವರು ಯಾವುದೇ ರೀತಿ ಮನವಿ ಮಾಡಿಕೊಂಡಿಲ್ಲ. ನಾಳೆ ಏನಾದ್ರೂ ಅಹಿತಕರ ಘಟನೆಗಳು ಸಂಭವಿಸಿದ್ರೆ ಅಂತವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಲು ನಾವು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ. ಡ್ರೋನ್ ಕ್ಯಾಮರಾ ಉಪಯೋಗಿಸಿಕೊಂಡು ರೈಲ್ವೆ ನಿಲ್ದಾಣ ಸೇರಿದಂತೆ ಪ್ರತಿಭಟನೆ ನಡೆಯುವ ಸಾಧ್ಯತೆ ಇರುವ ಸ್ಥಳಗಳಲ್ಲಿ ಕಣ್ಗಾವಲು ಇಡುತ್ತೇವೆ. ಬಂದೋಬಸ್ತ್ ಬಗ್ಗೆಯೂ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದರು.
ನಾವು ಎಲ್ಲವನ್ನು ಗಮನಿಸುತ್ತಿದ್ದೇವೆ. ಅವಶ್ಯಕತೆ ಕಂಡು ಬಂದರೆ ಅಂತವರ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇವೆ. ಪ್ರಚೋದನೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ. ಯಾರು ಆಕಾಂಕ್ಷಿಗಳು ಇದ್ದಾರೆ. ಯಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾದರೆ ಮುಂದೆ ಸರ್ಕಾರಿ ಕೆಲಸದಲ್ಲಿ ನೇಮಕಾತಿ ಪಡೆಯಲು ಅರ್ಹತೆ ಇರೋದಿಲ್ಲ. ಅದೇ ರೀತಿ ಖಾಸಗಿ ಕೆಲಸವನ್ನು ಅಷ್ಟು ಸುಲಭವಾಗಿ ಪಡೆದುಕೊಳ್ಳಲು ಆಗೋದಿಲ್ಲ. ಇದೆಲ್ಲವನ್ನೂ ಗಮನದಲ್ಲಿ ಇಟ್ಟುಕೊಂಡು ನಿಮ್ಮ ಭವಿಷ್ಯವನ್ನು ಉಜ್ವಲ ಮಾಡಿಕೊಳ್ಳುವ ಸಂದರ್ಭವಿದು. ಯಾವುದೇ ರೀತಿಯ ಪ್ರಚೋದನೆಗೆ ಕಿವಿಗೊಡದೆ ನಿಮ್ಮ ಭವಿಷ್ಯದ ಬಗ್ಗೆ ಯೋಚನೆ ಮಾಡಬೇಕು. ಏನೇ ಮಾಡೋದು ಇದ್ದರೆ ಅನುಮತಿ ಪಡೆದು, ಶಾಂತಿ ಸುವ್ಯವಸ್ಥೆಯಿಂದ ಮಾಡಬಹುದು. ಆದರೆ, ಯಾವುದೇ ಅನುಮತಿ ಪಡೆಯದೇ ಗಲಾಟೆ, ದೊಂಬಿ ಮಾಡಲು ಬಂದರೆ ನಾವು ಯಾವುದಕ್ಕೂ ಬಿಡೋದಿಲ್ಲ ಎಂದು ಎಚ್ಚರಿಸಿದರು.
ಓದಿ: ಬೆಳಗಾವಿ ಗುಂಪು ಸಂಘರ್ಷ ಪ್ರಕರಣ.. 26 ಆರೋಪಿಗಳು ಪೊಲೀಸ್ ವಶಕ್ಕೆ