ಬೆಳಗಾವಿ: ಸುಳೇಭಾವಿ ಗ್ರಾಮದಲ್ಲಿ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಎಂ. ಬಿ ಬೋರಲಿಂಗಯ್ಯ ಹೇಳಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಿನ್ನೆ ರಾತ್ರಿ 6 ರಿಂದ 7 ಜನರ ತಂಡದಿಂದ ಇಬ್ಬರ ಹತ್ಯೆ ಮಾಡಲಾಗಿತ್ತು. ನಾನು ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬೆಳಗಾವಿ ಗ್ರಾಮೀಣ ಎಸಿಪಿ ಗಿರೀಶ್, ಮಾರಿಹಾಳ ಸಿಪಿಐ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದರು.
ವೈಯಕ್ತಿಕ ದ್ವೇಷಗಳಿಂದ ಗಲಾಟೆ: ಸುಳೇಭಾವಿ ಗ್ರಾಮದಲ್ಲಿ ಮಾರಕಾಸ್ತ್ರಗಳಿಂದ ಕೊಚ್ಚಿ ಪ್ರಕಾಶ್ ಪಾಟೀಲ್, ಮಹೇಶ್ ಮುರಾರಿ ಹತ್ಯೆಗೈಯ್ಯಲಾಗಿದೆ. ಸದ್ಯಕ್ಕೆ ಆರು ಜನರನ್ನು ವಶಕ್ಕೆ ಪಡೆದು ತನಿಖೆ ಮಾಡಲಾಗುತ್ತಿದೆ. ವಶಕ್ಕೆ ಪಡೆದವರು ಅದೇ ಊರಿನವರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಅಷ್ಟೇ ಅಲ್ಲದೇ ಕೆಲವರು ದೂರ ಸಂಬಂಧಿಗಳು ಸಹ ಅಂತಾ ಗೊತ್ತಾಗಿದೆ. ವೈಯಕ್ತಿಕ ದ್ವೇಷಗಳಿಂದ ಗಲಾಟೆ ನಡೆದಿದೆ ಎಂದರು.
ಎರಡು ಮೂರು ದಿನಗಳ ಹಿಂದೆ ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದಿತ್ತು. ವಶಕ್ಕೆ ಪಡೆದ ಆರೋಪಿಗಳು 20ರಿಂದ 25ವರ್ಷದ ವಯೋಮಾನದವರಾಗಿದ್ದು, ಎಲ್ಲರೂ ಎರಡು ಮೂರು ವರ್ಷಗಳಿಂದ ಜೊತೆಯಲ್ಲಿ ಓಡಾಡಿಕೊಂಡಿದ್ದಾರೆ. ಸಣ್ಣಪುಟ್ಟ ಕೆಲಸ ಮಾಡುತ್ತಿದ್ದರು. ಕೆಲವರು ಬೆಳಗಾವಿಯಲ್ಲಿ ರೂಮ್ ಮಾಡಿ ವಾಸವಾಗಿದ್ದರು ಎಂದು ಹೇಳಿದರು.
ಖಾರದ ಪುಡಿ ಎರಚಿದ ಬಗ್ಗೆ ತನಿಖೆ: ವೈಲೆಂಟ್ ಆಗಿರುವ ರೀಲ್ಸ್ ಮಾಡ್ತಿದ್ರು ಎಂಬ ಮಾಹಿತಿ ಇದ್ದು, ಈ ಬಗ್ಗೆಯೂ ತನಿಖೆ ನಡೆಯುತ್ತಿದೆ. ಕೊಲೆಯಾದ ಮಹೇಶ್ ಮುರಾರಿ 2019ರಲ್ಲಿ ನಡೆದ ಕೊಲೆ ಪ್ರಕರಣದ ಆರೋಪಿಯಾಗಿದ್ದು, ಕೊಲೆಗೂ ಮುನ್ನ ಖಾರದ ಪುಡಿ ಎರಚಿದ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಸಿಸಿ ಕ್ಯಾಮರಾಗಳ ಪರಿಶೀಲನೆ: 8.45ರಿಂದ 9ಗಂಟೆ ಮಧ್ಯೆ ಈ ಘಟನೆ ನಡೆದಿದ್ದು, ಸಿಸಿ ಕ್ಯಾಮರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ. ಕೊಲೆಯಾದ ಮಹೇಶ್ ಮುರಾರಿ ಗೋಕಾಕ್‌ನ ಟೈಗರ್ ಗ್ಯಾಂಗ್ ಜೊತೆ ಲಿಂಕ್ ಇದ್ದ ಬಗ್ಗೆ ತನಿಖೆ ನಡೆಯುತ್ತಿದೆ. ವಶಕ್ಕೆ ಪಡೆದ ಓರ್ವನನ್ನು ಪ್ರಕಾಶ್ ಪಾಟೀಲ್ ಹೆದರಿಸಿದ್ದನು ಎಂಬ ಮಾಹಿತಿ ಇದ್ದು, ಆ ಬಗ್ಗೆಯೂ ತನಿಖೆ ಮುಂದುವರಿಯುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ. ಬೋರಲಿಂಗಯ್ಯ ಅವರು ಹೇಳಿದ್ದಾರೆ.
ಓದಿ: ಬೆಳಗಾವಿಯಲ್ಲಿ ಇಬ್ಬರು ರೌಡಿಗಳ ಮರ್ಡರ್... ದೇವಾಲಯದ ಕಟ್ಟೆಯ ಮೇಲೆಯೇ ಭೀಕರ ಹತ್ಯೆ