ಬೆಳಗಾವಿ: ಸರ್ಕಾರದಿಂದ ವಿತರಣೆಯಾಗುವ ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ.
ಬೆಳಗಾವಿ ತಾಲೂಕಿನ ಬಡಾಲ ಅಂಕಲಗಿ ಗ್ರಾಮದಲ್ಲಿ ಪಡಿತರ ಅಂಗಡಿಯಲ್ಲಿ ವಿತರಣೆಯಾದ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಪತ್ತೆಯಾಗಿರುವ ಕುರಿತು ಅಲ್ಲಿನ ಗ್ರಾಮಸ್ಥರು ಆರೋಪ ಮಾಡಿದ್ದಾರೆ. ಕಳೆದೆರಡು ದಿನಗಳ ಹಿಂದೆ ಗ್ರಾಮದಲ್ಲಿ ಪಡಿತರ ವಿತರಣೆ ಮಾಡಲಾಗಿತ್ತು. ಈ ವೇಳೆ ಮನೆಗೆ ತಂದ ಅಕ್ಕಿಯ ಕೆಲ ಕಾಳುಗಳಿಗೆ ಬೆಂಕಿ ಹಚ್ಚಿ ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಅಂಶ ಇರುವುದು ಪತ್ತೆ ಆಗಿದೆ. ಪಡಿತರ ಅಂಗಡಿ ಮಾಲೀಕ ಬಸವಣ್ಣೆಪ್ಪ ಎಂಬುವವರಿಗೆ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿರುವ ಬಗ್ಗೆ ಮಾಹಿತಿ ನೀಡಿ ಸುಮ್ಮನಾಗಿದ್ದರು. ಆದ್ರೆ ನಿನ್ನೆ ಮತ್ತೆ ವಿತರಣೆ ಮಾಡಲಾಗಿದ್ದ ಪಡಿತರ ಅಕ್ಕಿಯಲ್ಲೂ ಪ್ಲಾಸ್ಟಿಕ್ ಅಕ್ಕಿ ಇರುವುದು ಕಂಡುಬಂದಿದೆ.
ಹೀಗಾಗಿ ಅಂಗಡಿ ಮಾಲೀಕನ ಜತೆಗೆ ಗ್ರಾಮಸ್ಥರು ವಾಗ್ವಾದ ನಡೆಸಿದ್ದಲ್ಲದೇ ಪ್ಲಾಸ್ಟಿಕ್ ಅಕ್ಕಿ ಪತ್ತೆ ಆಗಿರುವ ಬಗ್ಗೆ ಆಹಾರ ಇಲಾಖೆಯ ಜಂಟಿ ನಿರ್ದೇಶಕ ಸಿ.ಬಿ.ಕೊಡ್ಲಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರ ಮಾಹಿತಿ ಮೇರೆಗೆ ಗ್ರಾಮಕ್ಕೆ ಆಗಮಿಸಿದ ಫುಡ್ ಇನ್ಸ್‌ಪೆಕ್ಟರ್ ಸಾರ್ವಜನಿಕರಿಂದ ಮಾಹಿತಿ ಪಡೆದುಕೊಂಡು, ಎರಡು ಕೆಜಿ ಪಡಿತರ ಅಕ್ಕಿಯ ಸ್ಯಾಂಪಲ್ ತಗೆದುಕೊಂಡು ಹೋಗಿದ್ದಾರೆ.
ಇದನ್ನೂ ಓದಿ: Rape case: ಬಾಂಗ್ಲಾ ಸಂತ್ರಸ್ತ ಯುವತಿಯ ಹೇಳಿಕೆ ಪಡೆಯಲು ಸಿದ್ಧತೆ... ಅಸಲಿಗೆ ಯಾರು ಈಕೆ, ನಡೆದಿದ್ದೇನು?
ಆಹಾರ ಇಲಾಖೆ ಸಿಬ್ಬಂದಿ ಅಕ್ಕಿಯನ್ನು ಪ್ರಯೋಗಾಲಯಕ್ಕೆ ಕಳಿಸಿ ಎರಡು ದಿನಗಳಲ್ಲಿ ತಿಳಿಸೋದಾಗಿ ಮಾಹಿತಿ ನೀಡಿದ್ದಾರೆ. ಆದ್ರೆ, ಲಾಕ್‌ಡೌನ್ ಇರೋದ್ರಿಂದ ಅಲ್ಲಿಯವರೆಗೂ ಬಡವರು ಏನು ತಿನ್ನೋದು ಅಂತಾ ಆಹಾರ ಇಲಾಖೆಯ ವಿರುದ್ಧ ಬಡಾಲ ಅಂಕಲಗಿ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ.