ಬೆಳಗಾವಿ: ಉತ್ತರ ಕರ್ನಾಟಕದ ಏಕೈಕ ಮೃಗಾಲಯ ಎಂಬ ಕೀರ್ತಿಗೆ ಪಾತ್ರವಾಗಿರುವ ಬೆಳಗಾವಿಯ ರಾಣಿಚೆನ್ನಮ್ಮ ಮೃಗಾಲಯದ ಸಿಂಹ, ಹುಲಿ ಹಾಗೂ ಚಿರತೆಗಳನ್ನು ಸಾರ್ವಜನಿಕರು ದತ್ತು ಪಡೆದಿದ್ದಾರೆ. ಎರಡು ತಿಂಗಳ ಹಿಂದೆಯೇ ಇಲ್ಲಿನ ಮೃಗಾಲಯಕ್ಕೆ 3 ಸಿಂಹ, 3 ಹುಲಿ ಹಾಗೂ 3 ಚಿರತೆಗಳನ್ನು ತರಲಾಗಿತ್ತು. ಈ 9 ಪ್ರಾಣಿಗಳನ್ನೂ ಬೆಳಗಾವಿ ನಿವಾಸಿಗಳು ದತ್ತು ಸ್ವೀಕರಿಸಿದ್ದಾರೆ.
ಸಿಂಹ, ಹುಲಿ ಹಾಗೂ ಚಿರತೆ ಬಂದ ನಂತರ ಮೃಗಾಲಯಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಾಗಿತ್ತು. ಆದರೆ ಕೋವಿಡ್ ಉಲ್ಬಣಗೊಳ್ಳುತ್ತಿರುವ ಹಿನ್ನಲೆ ಕರ್ಫ್ಯೂ ಜಾರಿಯಾದ ಬಳಿಕ ಮೃಗಾಲಯ ಬಂದ್ ಮಾಡಲಾಗಿತ್ತು. ಇದರಿಂದ ಮೃಗಾಲಯಕ್ಕೆ ಹರಿದು ಬರುತ್ತಿದ್ದ ಆದಾಯಕ್ಕೂ ಕೊಕ್ಕೆ ಬಿದ್ದಂತಾಗಿತ್ತು.
ಈ ಹಿನ್ನೆಲೆ ಪ್ರಾಣಿಗಳ ಪೋಷಣೆ ಮೃಗಾಲಯಕ್ಕೆ ಹೊರೆಯಾಗಲಾರಂಭಿಸಿತ್ತು, ಇದೀಗ ರಾಣಿಚೆನ್ನಮ್ಮ ವಿಶ್ವವಿದ್ಯಾಲಯ ಹೆಣ್ಣು ಸಿಂಹವನ್ನು ದತ್ತು ಪಡೆದಿದ್ದರೆ, ಇನ್ನುಳಿದ ಪ್ರಾಣಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಪ್ರಮುಖರು ದತ್ತು ಪಡೆದಿದ್ದಾರೆ.
ಪ್ರಾಣಿಗಳ ನಿರ್ವಹಣೆಗೆ ಬೇಕಿದೆ ಲಕ್ಷ ಲಕ್ಷ ಹಣ:
ಒಂದು ಸಿಂಹಕ್ಕೆ ಪ್ರತಿ ವರ್ಷ ಆಹಾರ ಸೇರಿ ಪಾಲನೆ ಪೋಷಣೆಗೆ 5 ಲಕ್ಷ ರೂ. ವೆಚ್ಚವಾಗುತ್ತದೆ. ಇನ್ನು ಹುಲಿಯ ಆಹಾರ ಸೇರಿ ಪೋಷಣೆಗೆ ನಾಲ್ಕೂವರೆ ಲಕ್ಷ ರೂ. ಖರ್ಚಾಗುತ್ತದೆ. ಚಿರತೆಯ ಆಹಾರ ಸೇರಿ ಪೋಷಣೆಗೆ ಪ್ರತಿ ವರ್ಷಕ್ಕೆ ಒಂದೂವರೆ ಲಕ್ಷ ರೂ. ವೆಚ್ಚವಾಗುತ್ತದೆ. ಇಂಥ ಸಂಕಷ್ಟದ ಸಮಯದಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವ ಮೂಲಕ ದಾನಿಗಳು ಮಾನವೀಯತೆ ಮೆರೆದಿದ್ದಾರೆ. ಅಲ್ಲದೇ ಅರಣ್ಯ ಇಲಾಖೆ ಸಿಬ್ಬಂದಿಗೂ ನೆರವಾಗಿದ್ದಾರೆ.
ಒಂದು ಲಕ್ಷ ನೀಡಿ ಸಿಂಹ, ಹುಲಿ ದತ್ತು
ಸಿಂಹ ಹಾಗೂ ಹುಲಿಯ ನಿರ್ವಹಣೆ ವರ್ಷಕ್ಕೆ 5 ಲಕ್ಷ ರೂ. ವೆಚ್ಚವಾಗುತ್ತದೆ. ಆದರೆ ಕರ್ನಾಟಕ ಮೃಗಾಲಯ ಪ್ರಾಧಿಕಾರ ಪ್ರಾಣಿಗಳ ದತ್ತು ನೀಡಲು ದರ ನಿಗದಿ ಮಾಡಿದೆ. ಹುಲಿ, ಸಿಂಹಕ್ಕೆ ಪ್ರತಿ ವರ್ಷ 1 ಲಕ್ಷ ಹಾಗೂ ಚಿರತೆಗೆ 35 ಸಾವಿರ ರೂ. ದರ ನಿಗದಿ ಮಾಡಲಾಗಿದೆ. ಹೀಗಾಗಿ ಬೆಳಗಾವಿಯಲ್ಲಿರುವ ಮೂರು ಹುಲಿ ಹಾಗೂ ಮೂರು ಸಿಂಹಗಳನ್ನು ತಲಾ ಒಂದಕ್ಕೆ 1 ಲಕ್ಷ ನೀಡಿ ಸಾರ್ವಜನಿಕರು ದತ್ತು ಪಡೆದಿದ್ದಾರೆ.
ಮೂರು ಚಿರತೆಗಳನ್ನು ತಲಾ 35 ಸಾವಿರ ನೀಡಿ ದತ್ತು ಪಡೆದುಕೊಂಡಿದ್ದಾರೆ. ಅಲ್ಲದೇ ಮೃಗಾಲಯದಲ್ಲಿರುವ ಹಲವು ಸಸ್ಯಾಹಾರಿ ಪ್ರಾಣಿಗಳನ್ನು ಕೂಡ ದತ್ತು ಪಡೆದಿದ್ದಾರೆ. ಪ್ರಾಣಿಪ್ರಿಯರಿಗೆ ಮೃಗಾಲಯದ ಸಿಬ್ಬಂದಿ ಮತ್ತೊಂದು ಆಫರ್ ನೀಡಿದ್ದು, ಜನ್ಮ ದಿನ, ಮದುವೆ ವಾರ್ಷಿಕೋತ್ಸವ ಹೀಗೆ ವಿಶೇಷ ದಿನಗಳ ಸಮಯದಲ್ಲಿ ಒಂದು ದಿನಕ್ಕೆ ಪ್ರಾಣಿಗಳನ್ನು ದತ್ತು ನೀಡುವ ಅವಕಾಶ ಕಲ್ಪಿಸಿದೆ. ಒಂದು ದಿನಕ್ಕೆ ಪ್ರಾಣಿಗಳ ಆಹಾರಕ್ಕೆ ತಗುಲುವ ವೆಚ್ಚ ಭರಿಸಿದರೆ ಆ ದಿನದ ಮಟ್ಟಿಗೆ ಪ್ರಾಣಿಗಳನ್ನು ದತ್ತು ನೀಡಲು ನಿರ್ಧರಿಸಿದ್ದಾರೆ.
ಈ ಕುರಿತು ಈಟಿವಿ ಭಾರತದ ಜೊತೆ ಮಾತನಾಡಿದ ವಲಯ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜ ಪಾಟೀಲ್ ಅವರು, ಮೃಗಾಲಯ ಪ್ರಾಧಿಕಾರ ಮಾರ್ಗಸೂಚಿಯಂತೆ ಹಣ ಪಡೆದು ಪ್ರಾಣಿಗಳನ್ನು ದತ್ತು ನೀಡಲಾಗಿದೆ. ಈಗ ಮೃಗಾಲಯಕ್ಕೆ ಪ್ರವಾಸಿಗರ ಪ್ರವೇಶವಿಲ್ಲ. ಪ್ರಾಣಿಗಳ ಆಹಾರ ಹಾಗೂ ಪೋಷಣೆಗೆ ಇಲಾಖೆಯ ಬೇರೆ ಯೋಜನೆಗೆ ಬಿಡುಗಡೆ ಆಗಿರುವ ಅನುದಾನವನ್ನು ಪ್ರಾಣಿಗಳಿಗೆ ನಿರ್ವಹಣೆಗೆ ಬಳಸುತ್ತಿದ್ದಾವೆ. ಮೃಗಾಲಯ ತೆರೆದರೆ ಈ ಸಮಸ್ಯೆ ಬಗೆಹರಿಯಲಿದೆ ಎಂದಿದ್ದಾರೆ.