ಬೆಳಗಾವಿ: ದೇಶ-ವಿದೇಶಗಳಲ್ಲಿ ಡೆಡ್ಲಿ ಕೊರೊನಾ ವೈರಸ್ ಜನರ ನಿದ್ದೆಗೆಡಿಸಿದೆ. ಈ ನಡುವೆ ಜಿಲ್ಲೆಯ ಬೈಲಹೊಂಗಲ ತಾಲೂಕಿನ ತುರಕನೂರು ಶೀಗಿಹಳ್ಳಿ ಗ್ರಾಮದ ಜನರಿಗೆ ಚರ್ಮರೋಗಗಳು ಕಾಡುತ್ತಿವೆ.
ಈ ಹಳ್ಳಿಯಲ್ಲಿ ಸುಮಾರು 400 ಕ್ಕೂ ಅಧಿಕ ಮನೆಗಳಿದ್ದು, ಕಳೆದ ಒಂದು ವರ್ಷದಿಂದ ಇಲ್ಲಿನ ಹಲವು ಜನರಿಗೆ ಈ ಸಾಂಕ್ರಾಮಿಕ ರೋಗದ ಲಕ್ಷಣಗಳು ಕಾಣಿಸಿಕೊಂಡಿವೆ. ಚರ್ಮರೋಗ ಬಿಸಿಲಿನ ಏರುಪೇರು ಮತ್ತು ವಾತಾವರಣದ ಬದಲಾವಣೆ ಹಾಗೂ ದೇಹದ ಬೆವರಿನರಿಂದಲೇ ಗಜಕರ್ಣ, ಕಜ್ಜಿ ಸೇರಿದಂತೆ ವಿವಿಧ ಚರ್ಮರೋಗಗಳು ಬರುತ್ತಿವೆ ಎಂದು ಹೇಳಲಾಗ್ತಿದೆ.
ಇದು ಎಲ್ಲರಿಗೂ ಸಹಜವಾಗಿ ಬರುವ ಕಾಯಿಲೆ ಆಗಿದ್ದು, ಗ್ರಾಮಸ್ಥರು ಹೆದರುವ ಅವಶ್ಯಕತೆ ಇಲ್ಲವೆಂದು ವೈದ್ಯರು ತಿಳಿಸಿದ್ದಾರೆ. ಗ್ರಾಮದಲ್ಲಿನ ನೀರಿನ ಸಮಸ್ಯೆಯಿಂದಲೇ ಇಂತಹ ಸಮಸ್ಯೆಗಳು ಕಾಡುತ್ತಿವೆ. ಸಂಬಂಧಿಸಿದ ಅಧಿಕಾರಿಗಳು ನೀರಿನ ಟ್ಯಾಂಕ್ಗಳನ್ನು ಸ್ವಚ್ಛವಾಗಿಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಕಾಯಿಲೆಯ ಗಂಭೀರತೆಯನ್ನು ಅರಿತ ತಾಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಮ್ಮ ಸಿಬ್ಬಂದಿ ಹಾಗೂ ಗ್ರಾಮದ ಆಶಾ ಕಾರ್ಯಕರ್ತರೊಂದಿಗೆ ಗ್ರಾಮದಲ್ಲಿ ಕ್ಯಾಂಪ್ ಮಾಡಿ ಪ್ರತಿ ಮನೆಗಳಿಗೆ ತೆರಳಿ ಚರ್ಮರೋಗ ಹರಡುವ ಬಗ್ಗೆ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿದ್ದಾರೆ. ಬೆಳಗ್ಗೆಯಿಂದ ಸಂಜೆವರೆಗೂ ವೈದ್ಯರು ಊರಿನಲ್ಲಿದ್ದು, ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದಾರೆ.