ಬೆಳಗಾವಿ: ನಗರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿನ್ನೆ ರಾತ್ರಿ ಬಿರುಗಾಳಿ ಸಹಿತ ಸುರಿದ ಭಾರಿ ಮಳೆಗೆ ಜನ ತತ್ತರಿಸಿ ಹೋಗಿದ್ದಾರೆ. ಏಕಾಏಕಿ ಸುರಿದ ಧಾರಾಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಮುಂಗಾರು ಪೂರ್ವ ಮಳೆಗೆ ಹಲವು ಕಡೆ ಅವಾಂತರ ಸೃಷ್ಟಿಯಾಗಿದ್ದು, ಮುಂದಿನ ತಿಂಗಳಿಂದ ಆರಂಭವಾಗುವ ಮಾನ್ಸೂನ್ ಮಳೆ ಏನೆಲ್ಲಾ ಸಮಸ್ಯೆಗಳನ್ನು ಸೃಷ್ಟಿಸುತ್ತದೆ ಎಂದು ಜನ ಆತಂಕಕ್ಕೀಡಾಗಿದ್ದಾರೆ.
ಕಳೆದ ರಾತ್ರಿ ಗುಡುಗು ಸಹಿತ ಸುರಿದ ಧಾರಾಕಾರ ಮಳೆಯಿಂದಾಗಿ, ಅಲ್ಲಲ್ಲಿ ಗಿಡ, ಮರಗಳು ಧರೆಗುರುಳಿರುವ ಪರಿಣಾಮ ಜನರು ಪರದಾಡುವಂತಾಯಿತು. ವಿವಿಧ ಕೆಲಸಗಳಿಗೆ ನಗರಕ್ಕೆ ಆಗಮಿಸಿದ್ದ ಸಾರ್ವಜನಿಕರು, ಅಂಗಡಿ, ಮಾಲ್, ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತಮ್ಮ ಮನೆಗಳಿಗೆ ತಲುಪಲು ಹೈರಾಣಾದರು. ಅನೇಕ ಕಡೆ ರಸ್ತೆಗಳ ಮೇಲೆ ಮರ ಉರುಳಿದ್ದರಿಂದ ವಾಹನಗಳ ಸಂಚಾರಕ್ಕೆ ವ್ಯತ್ಯಯವಾಯಿತು. ಬೈಕ್ ಮೇಲೆ ಹೋಗುವವರು, ಪಾದಚಾರಿಗಳು ಎಲ್ಲಿ ಮರ ನಮ್ಮ ಮೈಮೇಲೆ ಬಿದ್ದಿತ್ತು ಎಂದು ಜೀವ ಭಯದಲ್ಲಿ ರಸ್ತೆ ಪಕ್ಕದ ಅಂಗಡಿ, ಹೋಟೆಲ್ಗಳಲ್ಲಿ ಆಶ್ರಯಿಸಿದ ದೃಶ್ಯಗಳು ಎಲ್ಲೆಡೆ ಕಂಡುಬಂದವು.
ಶಿವಬಸವ ನಗರದ ಗ್ಯಾಂಗವಾಡಿ ಪ್ರದೇಶದಲ್ಲಿ ಗಾಳಿಯ ರಭಸಕ್ಕೆ ಮನೆಯ ಮೇಲ್ಛಾವಣಿ ಹಾರಿದ ಪರಿಣಾಮ ಆರು ಮನೆಗಳಿಗೆ ಹಾನಿ ಉಂಟಾಗಿದೆ. ಇನ್ನು ಮನೆಯೊಳಗೆ ನೀರು ನುಗ್ಗಿದ್ದರಿಂದ ಹಲವು ಕುಟುಂಬಗಳು ನೆರೆಹೋರೆಯವರ ಮನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಗ್ಯಾಂಗವಾಡಿ ಸಂತ್ರಸ್ತ ಡಾನ್ ಚೌಗುಲೆ ಈಟಿವಿ ಭಾರತ ಜೊತೆ ಮಾತನಾಡಿ, ಮಳೆ-ಗಾಳಿಗೆ ಮನೆ ಮೇಲಿನ ಶೀಟ್ ಬಿದ್ದು ಐದು ಮನೆಗಳಿಗೆ ಹಾನಿಯಾಗಿದೆ. ನಮಗೆ ಏನು ಮಾಡಬೇಕು ಅಂತಾ ಗೊತ್ತಾಗುತ್ತಿಲ್ಲ. ಪಾಲಿಕೆ ಅಧಿಕಾರಿಗಳು ಬಂದು ಹೋಗಿದ್ದಾರೆ. ಸರ್ಕಾರ ಮನೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮತ್ತೊರ್ವ ಸಂತ್ರಸ್ತೆ ಆರತಿ ತುಳಸಕರ್ ಮಾತನಾಡಿ, ನಾವು ಮನೆ ಕಟ್ಟಿ ಐದು ವರ್ಷವಾಗಿದೆ. ನಿನ್ನೆ ರಾತ್ರಿ ಸುರಿದ ಮಳೆ ಮತ್ತು ಬಿರುಗಾಳಿಯಿಂದಾಗಿ ಮನೆ ಮೇಲೆ ಹಾಕಿದ್ದ ಶೀಟ್ ಹಾರಿ ಹೋಗಿದೆ. ಇಸ್ತ್ರಿ ಮಾಡಿಕೊಂಡು ಜೀವನ ಸಾಗಿಸುವ ನಮಗೆ ತೊಂದರೆಯಾಗಿದ್ದು, ಸರ್ಕಾರ ನಮಗೆ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೇ ಶಿವ ಹೋಟೆಲ್ ಎದುರಿನ ಬಿಲ್ಡಿಂಗ್ ಮೇಲಿನ ಪ್ಲಾಸ್ಟಿಕ್ ಶೀಟ್ ಬಿದ್ದು, ಮೆಡಿಕಲ್ ವಿದ್ಯಾರ್ಥಿನಿಗೆ ಗಾಯವಾಗಿದೆ. ಅದೇ ರೀತಿ ಗಾಂಧಿ ನಗರದಲ್ಲೂ ಹಲವು ಮನೆಗಳ ಶೀಟ್ ಹಾರಿ ಹೋಗಿದ್ದು, ಎರಡು ವಿದ್ಯುತ್ ಕಂಬಗಳು ಧರೆಗುರುಳಿವೆ. ಕೊತವಾಲ್ ಗಲ್ಲಿ, ಶಾಹಪುರ, ವಡಗಾವಿ, ಕ್ಲಬ್ ರೋಡ್, ಸದಾಶಿವನಗರ ಸೇರಿ ಅನೇಕ ಕಡೆಗಳಲ್ಲೂ ಮಳೆಯಿಂದಾಗಿ ಮರಗಳು ಉರುಳಿಬಿದ್ದ ಪರಿಣಾಮ ಅವಾಂತರ ಸೃಷ್ಟಿಯಾಗಿತ್ತು.
ಸರ್ದಾರ ಪ್ರೌಢಶಾಲೆ ಬಳಿ ವಿದ್ಯುತ್ ತಂತಿಗಳು ಗಾಳಿಯ ರಭಸಕ್ಕೆ ಧರೆಗುರುಳಿವೆ. ಹೀಗಾಗಿ ಸರ್ದಾರ್ ಪ್ರೌಢಶಾಲೆ ಮುಂಭಾಗದ ರಸ್ತೆಯಲ್ಲಿ ಬ್ಯಾರಿಕೇಡ್ ಹಾಕಿರುವ ಪೊಲೀಸರು ಸಂಚಾರ ಸ್ಥಗಿತಗೊಳಿಸಿದ್ದಾರೆ. ಇನ್ನು ಅನೇಕ ಕಡೆ ವಿದ್ಯುತ್ ಕಂಬಗಳು ಬಿದ್ದ ಹಿನ್ನೆಲೆಯಲ್ಲಿ ಬೆಳಗಾವಿ ನಗರ ಸೇರಿ ಸುತ್ತಮುತ್ತಲಿನ ಎಲ್ಲ ಗ್ರಾಮಗಳಲ್ಲಿ ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಲಾಗಿತ್ತು. ಒಂದಿಷ್ಟು ಪ್ರದೇಶಗಳಲ್ಲಿ ಮಧ್ಯರಾತ್ರಿ ವಿದ್ಯುತ್ ಬಂದರೆ, ಮತ್ತೊಂದಿಷ್ಟು ಕಡೆ ಇಂದು ಬೆಳಗ್ಗೆ ವಿದ್ಯುತ್ ಪೂರೈಕೆ ಪುನಃ ಆರಂಭವಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿದ ಹಿನ್ನೆಲೆಯಲ್ಲಿ ಇಂದು ಕತ್ತಲಿನಲ್ಲೇ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ನಿರ್ವಹಿಸುವಂತಾಗಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಜ್ಯುವೆಲ್ಲರಿ ಶಾಪ್‌ಗೆ ನುಗ್ಗಿದ ಮಳೆ ನೀರು: ಕೊಚ್ಚಿ ಹೋದ ಚಿನ್ನಾಭರಣ!