ಅಥಣಿ: ಡಿಸಿಎಂ ಲಕ್ಷ್ಮಣ್ ಸವದಿ ಸ್ವಕ್ಷೇತ್ರ ಅಥಣಿ ತಾಲೂಕು ಝುಂಜರವಾಡ ಗ್ರಾಮದಲ್ಲಿ ರಾತ್ರಿ ಹತ್ತು ಗಂಟೆಯ ಕಳೆದರೂ ಪಡಿತರ ಅಂಗಡಿ ಮುಂದೆ ಜನರು ಸಾಲುಗಟ್ಟಿ ನಿಂತಿದ್ದ ದೃಶ್ಯಗಳು ಕಂಡು ಬಂದವು.
ಆಹಾರ ಇಲಾಖೆ ವೆಬ್ಸೈಟ್ ಕಾರ್ಯ ನಿರ್ವಹಿಸದೆ ಇರುವುದರಿಂದ ಜನರಿಗೆ ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಈಗಾಗಲೇ ಪ್ರತಿ ನ್ಯಾಯಬೆಲೆ ಅಂಗಡಿಗೂ ಸುತ್ತೋಲೆ ಹೊರಡಿಸಿರುವ ಇಲಾಖೆ, ಅನ್ನಭಾಗ್ಯ ಯೋಜನೆ ಪಡಿತರ ಪಡೆಯಲು ಕುಟುಂಬದ ಸದಸ್ಯರಿಂದ ಬಯೋಮೆಟ್ರಿಕ್ ಅಗತ್ಯ ಇಲ್ಲ, ಸದಸ್ಯರ ಸಹಿ ಮಾಡಿಸಿಕೊಂಡು ಪಡಿತರ ಆಹಾರ ಧಾನ್ಯಗಳನ್ನು ನೀಡಿ ಎಂದು ತಿಳಿಸಿದೆ.
ಆದರೆ ಈ ನಡುವೆ ಅಥಣಿಯ ನ್ಯಾಯಬೆಲೆ ಅಂಗಡಿ ಇವತ್ತೇ ಆಹಾರ ಧಾನ್ಯಗಳನ್ನು ಪಡೆದುಕೊಂಡು ಹೋಗಿ, ನಾಳೆ ನೀಡಲ್ಲವೆಂದು ಹೇಳಿದೆಯಂತೆ. ಇದರಿಂದ ಗೊಂದಲಕ್ಕೀಡಾದ ಜನರು, ನ್ಯಾಯ ಬೆಲೆ ಅಂಗಡಿಗೆ ಧಾವಿಸಿದ್ದಾರೆ. ಹೀಗಾಗಿ ಜನರು ಕಿಲೋ ಮೀಟರ್ಗಟ್ಟಲೇ ಸಾಲುಗಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಇದರಿಂದಾಗಿ ರಾತ್ರಿ ಹತ್ತು ಗಂಟೆಯಾದರು ನೂರಾರು ಜನರು ನ್ಯಾಯಬೆಲೆ ಅಂಗಡಿ ಮುಂದೆ ಸಾಲುಗಟ್ಟಿ ನಿಂತಿದ್ದರು.
ಈ ಬಗ್ಗೆ ಆಹಾರ ವಿತರಕರನ್ನು ಕೇಳಿದ್ರೆ, ಒಂದು ನ್ಯಾಯಬೆಲೆ ಅಂಗಡಿಯಲ್ಲಿ 1000 ಕ್ಕಿಂತಲೂ ಹೆಚ್ಚು ಜನರು ಪಡಿತರ ಕಾರ್ಡು ಹೊಂದಿರುತ್ತಾರೆ. ಇದರಿಂದಾಗಿ ಒಂದೇ ದಿನದಲ್ಲಿ ಆಹಾರ ಧಾನ್ಯಗಳನ್ನು ನೀಡುವುದು ಕಷ್ಟದ ಕೆಲಸವಾಗಿದೆ. ನಮ್ಮ ಮೇಲಾಧಿಕಾರಿಗಳ ಆದೇಶದಂತೆ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ ಎನ್ನುತ್ತಾರೆ. ನಮಗೆ ಆಹಾರ ಸಾಮಗ್ರಿಗಳನ್ನು ಕೊಂಡೊಯ್ಯಲು ಸರಿಯಾದ ವಾಹನ ಸೌಲಭ್ಯವಿಲ್ಲ ಮತ್ತು ದಿನಗಟ್ಟಲೇ ಸರತಿ ಸಾಲಿನಲ್ಲಿ ನಿಲ್ಲಬೇಕು. ಹೀಗಾಗಿ ಜಿಲ್ಲಾಡಳಿತ ಇನ್ನೂ ಎರಡು ದಿನಗಳನ್ನು ಹೆಚ್ಚಿಗೆ ನೀಡಬೇಕು ಎಂದು ಜನರು ಆಗ್ರಹಿಸಿದ್ದಾರೆ.