ಬೆಳಗಾವಿ: ರಾಜ್ಯದ ದೇಶೀಯ ವಿಮಾನ ನಿಲ್ದಾಣಗಳ ಪೈಕಿ ಪ್ರಯಾಣಿಕರ ವಿಮಾನ ಸಂಚಾರದಲ್ಲಿ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣ ನವೆಂಬರ್ ತಿಂಗಳಲ್ಲಿ ಮೊದಲ ಸ್ಥಾನ ಪಡೆಯುವ ಮೂಲಕ ದಾಖಲೆ ಬರೆದಿದೆ. ಇದಕ್ಕೆ ಬೆಳಗಾವಿ ಉದ್ಯಮಿಗಳು ಸಂತಸ ವ್ಯಕ್ತಪಡಿಸಿದ್ದು, ಮತ್ತಷ್ಟು ವಿಮಾನ ಸೇವೆ ಒದಗಿಸಿದರೆ ಇನ್ನೂ ಅನುಕೂಲ ಆಗುತ್ತದೆ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.
ಉತ್ತರ ಕರ್ನಾಟಕ ಅಷ್ಟೇ ಅಲ್ಲದೇ ದಕ್ಷಿಣ ಮಹಾರಾಷ್ಟ್ರದ ಪ್ರಯಾಣಿಕರು ಹೆಚ್ಚು ಅವಲಂಬಿಸಿರುವ ಇದೇ ಬೆಳಗಾವಿ ವಿಮಾನ ನಿಲ್ದಾಣವನ್ನು ಅಲ್ಲದೇ ಕರ್ನಾಟಕ, ಗೋವಾ ಮತ್ತು ಮಹಾರಾಷ್ಟ್ರ ಮೂರು ರಾಜ್ಯಗಳ ಪ್ರಮುಖಕೊಂಡಿ ಬೆಳಗಾವಿಯಿಂದ ದಿನನಿತ್ಯ ಸಾಕಷ್ಟು ಸಂಖ್ಯೆಯಲ್ಲಿ ಉದ್ಯಮಿಗಳು, ರಾಜಕಾರಣಿಗಳು ಓಡಾಡುತ್ತಾರೆ. ಆದರೆ ಕಳೆದ ವರ್ಷ ದೆಹಲಿ ಸೇರಿದಂತೆ ದೇಶದ ವಿವಿಧ ನಗರಗಳಿಗೆ ಬೆಳಗಾವಿಯಿಂದ ವಿಮಾನ ಸಂಚಾರ ಏಕಾಏಕಿ ಸ್ಥಗಿತಗೊಳಿಸಲಾಗಿತು. ಇದರಿಂದ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿ ಸಾಕಷ್ಟು ಟೀಕೆಯೂ ಕೂಡ ಕೇಳಿ ಬಂದಿತ್ತು.
ಎಲ್ಲರ ಒತ್ತಾಯದ ಮೇರೆಗೆ ಈಗ ಮತ್ತೆ ಬೆಳಗಾವಿ ದೆಹಲಿ ಮಧ್ಯೆ ಪ್ರತಿದಿನ ವಿಮಾನ ಸಂಚಾರ ಪುನಾರಂಭಗೊಂಡಿದೆ. ಅಲ್ಲದೇ ಬೆಳಗಾವಿ-ಬೆಂಗಳೂರು ನಡುವಿನ ವಿಮಾನಗಳ ಸಂಚಾರ ಹೆಚ್ಚಾಗಿದೆ. ಇದರಿಂದ ನವೆಂಬರ್ ತಿಂಗಳಲ್ಲಿ ರಾಜ್ಯದ ಡೊಮೆಸ್ಟಿಕ್ ವಿಮಾನ ನಿಲ್ದಾಣಗಳ ಪೈಕಿ ಅತಿ ಹೆಚ್ಚು ಜನ ಪ್ರಯಾಣಿಸಿದ ವಿಮಾನ ನಿಲ್ದಾಣ ಎಂಬ ಖ್ಯಾತಿಗೆ ಇದು ಪಾತ್ರವಾಗಿದೆ. ಇನ್ನು ರಾಜ್ಯದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಆದ ಬೆಂಗಳೂರು ಮತ್ತು ಮಂಗಳೂರು ವಿಮಾನ ನಿಲ್ದಾಣಗಳ ಬಳಿಕ ಬೆಳಗಾವಿ ವಿಮಾನ ನಿಲ್ದಾಣ ಮೂರನೇ ಸ್ಥಾನದಲ್ಲಿದೆ.
ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಅಂಕಿ ಅಂಶಗಳ ಪ್ರಕಾರ ಕಳೆದ ಅಕ್ಟೋಬರ್ ತಿಂಗಳಿಗೆ ಹೋಲಿಸಿದರೆ ನವೆಂಬರ್ ತಿಂಗಳಲ್ಲಿ ಪ್ರಯಾಣಿಕರ ಸಂಖ್ಯೆಯಲ್ಲಿ ಶೇ 9.47ರಷ್ಟು ಹೆಚ್ಚಳವಾಗಿದೆ. ನವೆಂಬರ್‌ನಲ್ಲಿ ಬೆಳಗಾವಿಯಿಂದ 531 ವಿಮಾನಗಳಲ್ಲಿ ಒಟ್ಟು 32,059 ಜನರು ಪ್ರಯಾಣ ಮಾಡಿದ್ದಾರೆ.
ಸದ್ಯ ಬೆಳಗಾವಿ ವಿಮಾನ ನಿಲ್ದಾಣದಿಂದ ಬೆಂಗಳೂರು, ದೆಹಲಿ, ಮುಂಬೈ, ಹೈದರಾಬಾದ್, ಅಹಮದಾಬಾದ್, ಸೂರತ್, ನಾಗ್ಪುರ, ತಿರುಪತಿ, ಜೋಧಪುರ ಹಾಗೂ ಜೈಪುರ ಸೇರಿದಂತೆ ದೇಶದ 10 ನಗರಗಳಿಗೆ ನೇರ ವಿಮಾನ ಸಂಚಾರದ ಸೌಲಭ್ಯವಿದೆ. ಅಲ್ಲದೇ ವಿಮಾನ ನಿಲ್ದಾಣ ಪ್ರಾಧಿಕಾರದ ಮೂಲಗಳ ಪ್ರಕಾರ ಬೆಳಗಾವಿ-ಬೆಂಗಳೂರು ನಡುವೆ ಹೆಚ್ಚುವರಿ ವಿಮಾನಗಳು ಹಾಗೂ ಬೆಳಗಾವಿ-ಪುಣೆ ನಡುವೆ ಹೊಸದಾಗಿ ವಿಮಾನ ಸಂಚಾರ ಪ್ರಾರಂಭವಾಗಲಿದ್ದು ಪ್ರಯಾಣಿಕರ ದಟ್ಟಣೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಬೆಳಗಾವಿಯ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಚನ್ನಬಸಪ್ಪ ಹೊಂಡದಕಟ್ಟಿ 'ಈಟಿವಿ ಭಾರತ'ದ ಜೊತೆ ಮಾತನಾಡಿ, ಮೊದಲು ಬಹಳಷ್ಟು ವಿಮಾನಗಳನ್ನು ಸ್ಥಗಿತಗೊಳಿಸಿದ್ದರು. ಈಗ ಹೆಚ್ಚಿಗೆ ಮಾಡಿದ್ದರಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿರುವುದು ಖುಷಿಯ ವಿಚಾರ. ಬೆಳಗಾವಿ ಬೆಂಗಳೂರು ನಂತರ ಹೆಚ್ಚು ಕೈಗಾರಿಕೆಗಳನ್ನು ಹೊಂದಿದೆ. ಹೀಗಾಗಿ ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸೌಲಭ್ಯಗಳನ್ನು ಹೆಚ್ಚಿಸಿ, ವಿಮಾನಗಳನ್ನೂ ಹೆಚ್ಚಿಸುವಂತೆ ಮನವಿ ಮಾಡಿದರು.
ಬೆಳಗಾವಿ ವಿಮಾನ ನಿಲ್ದಾಣದ ನಿರ್ದೇಶಕ ತ್ಯಾಗರಾಜನ್ 'ಈಟಿವಿ ಭಾರತ' ಜೊತೆ ಮಾತನಾಡಿ, ನವೆಂಬರ್ ತಿಂಗಳಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ ನಮ್ಮ ನಿಲ್ದಾಣ ಪ್ರಥಮ ಸ್ಥಾನ ಪಡೆದಿದೆ. ಈಗ ಪ್ರತಿನಿತ್ಯ ಬೆಳಗಾವಿಯಿಂದ 10 ನಗರಗಳಿಗೆ ವಿಮಾನ ಸಂಚಾರವಿದೆ. ಪುಣೆ ಮತ್ತು ಚೆನ್ನೈ ನಗರಗಳಿಗೂ ವಿಮಾನಸೇವೆ ಆರಂಭಿಸಬೇಕು ಎಂಬ ಬೇಡಿಕೆ ಬಂದಿದೆ. ಈ ಬಗ್ಗೆ ಚಿಂತನೆ ನಡೆಸಿದ್ದೇವೆ. ಮುಂದಿನ ದಿನಗಳಲ್ಲಿ ಅಲ್ಲಿಯೂ ವಿಮಾನ ಸೇವೆ ಆರಂಭಿಸುತ್ತೇವೆ ಎಂದರು.
ಇದನ್ನೂಓದಿ: ಬಿಎಂಟಿಸಿ ಸೇರಿದ 100 ಟಾಟಾ ಎಲೆಕ್ಟ್ರಿಕ್ ಬಸ್: ವಿಶೇಷತೆಗಳೇನು?