ಬೆಳಗಾವಿ: ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಪೋಷಕರೇ ಎಮರ್ಜೆನ್ಸಿ ವಾರ್ಡ್ನಿಂದ ಮಕ್ಕಳ ವಾರ್ಡ್ಗೆ ಸ್ಥಳಾಂತರಿಸಿದ ವಿಡಿಯೋ ವೈರಲ್ ಆಗಿರುವ ಕುರಿತು ಈಗಾಗಲೇ ತನಿಖೆಗೆ ಆದೇಶಿಸಲಾಗಿದೆ ಎಂದು ಬಿಮ್ಸ್ ನಿರ್ದೇಶಕ ವಿನಯ ದಾಸ್ತಿಕೊಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾಸ್ಪತ್ರೆಯಲ್ಲಿ ಸ್ಟ್ರೆಚರ್ ಕೊರತೆ ಇದೆ ಎಂಬ ಕಾರಣಕ್ಕೆ ತೀವ್ರ ಜ್ವರದಿಂದ ಬಳಲುತ್ತಿದ್ದ ಬಾಲಕನನ್ನು ಕುಟುಂಬಸ್ಥರೇ ಹೊತ್ತುಕೊಂಡು ಹೋಗಿರುವುದು ತಪ್ಪು. ಆದ್ರೆ, ಆಸ್ಪತ್ರೆಯಲ್ಲಿ ಸ್ಟ್ರೆಚರ್ ಸೇರಿದಂತೆ ಯಾವುದೇ ಕೊರತೆಯೂ ಇಲ್ಲವೆಂದು ಸ್ಪಷ್ಟಪಡಿಸಿದರು.
ಮಕ್ಕಳ ವಾರ್ಡ್ಗೆ ಹೋಗುವ ಮಾರ್ಗದಲ್ಲಿ ಒಳ ರಸ್ತೆ ಕಾಮಗಾರಿ ನಡೆಯುತ್ತಿದೆ. ಹೀಗಾಗಿ ಅಲ್ಲಿ ಸ್ಟ್ರೆಚರ್ ಹೋಗದ ಕಾರಣ ಮಗುವನ್ನು ಹೊತ್ತುಕೊಂಡು ಹೋಗಿರಬಹದು. ಹೀಗಾಗಿ ಆ ಮಗುವಿನೊಂದಿಗಿರುವ ಡಾಕ್ಟರ್ನ್ನು ಕರೆದು ಮಾಹಿತಿ ಪಡೆಯುತ್ತೇನೆ. ಯಾವ ಕಾರಣಕ್ಕೆ ಮಗುವನ್ನು ಹೊತ್ತೊಯ್ಯಲಾಗಿದೆ ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಹೇಳಿದರು.
ಈ ವಿಚಾರದಲ್ಲಿ ಏನಾದರೂ ತಪ್ಪು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಬಿಮ್ಸ್ ನಿರ್ದೇಶಕ ದಾಸ್ತಿಕೊಪ್ಪ ತಿಳಿಸಿದರು.