ಬೆಳಗಾವಿ: ಕಾಂಗ್ರೆಸ್ ನವರು ಹಿಂದೂಗಳು ಹೌದೋ ಅಲ್ವೋ ಅನ್ನೋ ಪ್ರಶ್ನೆ ಪ್ರತಿಯೊಬ್ಬರ ಮನಸ್ಸಿನಲ್ಲಿ ಮೂಡುತ್ತಿದೆ. ಹೀಗಾಗಿ ದೇಶದಲ್ಲಿ ಕಾಂಗ್ರೆಸ್ ಬಿತ್ತಿರುವ ಕಳೆಯನ್ನು ನಾವೆಲ್ಲರೂ ಕಿತ್ತು ಹಾಕಬೇಕು ಎಂದು ಕುಡಚಿ ಬಿಜೆಪಿ ಶಾಸಕ ಪಿ ರಾಜೀವ್ ಹೇಳಿದರು.
ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸತೀಶ್ ಜಾರಕಿಹೊಳಿ ಹಿಂದೂ ಪದ ಅಶ್ಲೀಲ ಎಂದು ಹೇಳಿಕೆ ಕೊಡುತ್ತಾರೆ. ಜಿಹಾದಿ ಮನಸ್ಥಿತಿ ಬೆಂಬಲಿಸುವವರನ್ನು ಖಂಡಿಸುವ ಎದೆಗಾರಿಕೆ ನಿಮಗೆ ಇದೆಯಾ ಎಂದು ಸತೀಶ್ ಜಾರಕಿಹೊಳಿಗೆ ಪಿ ರಾಜೀವ್ ಪ್ರಶ್ನಿಸಿದರು. ಅಲ್ಲದೇ ಹಿಂದೂಗಳು ಅಶ್ಲೀಲ ಎನ್ನುವ ನಿಮಗೆ ಜಿಹಾದಿ ಮನಸ್ಥಿತಿ ಖಂಡಿಸಲು ಯಾಕೆ ಆಗಿಲ್ಲ ಎಂದು ಕೇಳಿದರು.
ಇನ್ನು, ಮಂಗಳೂರಿನಲ್ಲಿ ಇತ್ತೀಚೆಗೆ ಸಂಭವಿಸಿದ ಬಾಂಬ್ ಬ್ಲಾಸ್ಟ್ ಪ್ರಕರಣ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪ್ರಕರಣದ ಆರೋಪಿ ಶಾರಿಕ್ ಈಗಾಗಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಭಯೋತ್ಪಾದಕ ಚಟುವಟಿಕೆಗಳಿಗೆ ಕರ್ನಾಟಕ ಸ್ಲೀಪರ್ ಸೆಲ್ ಆಗ್ತಿದೆಯಾ ಎಂಬ ಅನುಮಾನಗಳು ಕಾಡತೊಡಗಿದ್ದು, ಇದನ್ನ ಹತ್ತಿಕ್ಕಲು ಗೃಹ ಸಚಿವರು ಮಂಗಳೂರಿಗೆ ಭೇಟಿ ಕೊಟ್ಟಿದ್ದಾರೆ. ಈ ಪ್ರಕರಣ ಕರ್ನಾಟಕ, ಭಾರತ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ. ಶಾರೀಕ್ನಂತವರು ನಮ್ಮ ನಿಮ್ಮ ಮಧ್ಯೆ ಇರಬಹುದು. ಪ್ರತಿಯೊಬ್ಬ ಪ್ರಜೆಯೂ ಗುಪ್ತಚರ ಇಲಾಖೆ ಕೆಲಸ ಮಾಡಿದಂತೆ ಮಾಡಿ. ಇಂತವರ ಬಗ್ಗೆ ಪೊಲೀಸ್ ಇಲಾಖೆಗೆ ಮಾಹಿತಿಯನ್ನು ಕೊಡುವ ಜವಾಬ್ದಾರಿ ತೆಗೆದುಕೊಳ್ಳಬೇಕು ಎಂದರು.
ಭಯೋತ್ಪಾದಕ ಚಟುವಟಿಕೆ ಇಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾಂಗ್ರೆಸ್ ಕಾರಣ. ಭಯೋತ್ಪಾದನೆ ಕಾಂಗ್ರೆಸ್‌ನ ಪಾಪದ ಕೂಸು. ಸಿದ್ದರಾಮಯ್ಯ ಸರ್ಕಾರದಲ್ಲಿ ಪಿಎಫ್‌ಐ ಮೇಲೆ ದಾಖಲಾದ 130ಪ್ರಕರಣ ಹಿಂತೆಗೆದುಕೊಂಡರು. ಇಂತಹ ಪ್ರಕರಣದಲ್ಲಿ ಭಾಗಿಯಾದವರನ್ನು ಬಿಡುಗಡೆ ಮಾಡಿದರು. ಸಿದ್ದರಾಮಯ್ಯ ಗೃಹ ಇಲಾಖೆಗೆ ಪತ್ರ ಬರೆದು, ಎಷ್ಟು ಜನ ಮುಸ್ಲಿಮರು ಎಷ್ಟು ದಿನದಿಂದ ಜೈಲಿನಲ್ಲಿದ್ದಾರೆ. ಅವರ ಮೇಲೆ ಎಷ್ಟು ಪ್ರಕರಣಗಳು ದಾಖಲಾಗಿದೆ ಎಂಬುದರ ಬಗ್ಗೆ ಮಾಹಿತಿ ಕೇಳಿದ್ದಾರೆ.
ಕಾಂಗ್ರೆಸ್‌ನ ಇಂತಹ ತುಷ್ಟೀಕರಣ ರಾಜಕಾರಣದಿಂದ ಭಾರತ ಭಯೋತ್ಪಾದಕರ ಅಡಗು ತಾಣವಾಗಿದೆ. ಶಾರೀಕ್ ಬಹಳ ದೊಡ್ಡ ದಾಳಿಯನ್ನು ಮಾಡಬೇಕೆಂದು ಸಂಚು ಮಾಡಿದ್ದನು. ಅದು ಸಕ್ಸಸ್ ಆಗಿ ಅನಾಹುತ ಆಗಿದ್ದರೇ ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ಮೇಲೆ ಗೂಬೆ ಕೂರಿಸುವ ಆರೋಪ ಮಾಡುತಿತ್ತು. ಬಿಜೆಪಿಯವರೇ ಇದನ್ನು ಮಾಡಿಸಿದ್ದಾರೆ ಅಂತಾ ಕಾಂಗ್ರೆಸ್ ಆರೋಪ ಮಾಡ್ತಿತ್ತು ಎಂದರು.
ಚೀನಾ ಮತ್ತು ಭಾರತ ಗಡಿಯಲ್ಲಿ ಉದ್ವಿಗ್ನತೆ ಇದ್ದಾಗ ಚೀನಾದ ಯೋಧರ ಪರವಾಗಿ ರಾಹುಲ್ ಗಾಂಧಿ ಭಾಷಣ ಮಾಡ್ತಾರೆ. 60ವರ್ಷದ ತುಷ್ಟೀಕರಣ ನೀತಿ ಭಾರತವನ್ನು ಇಲ್ಲಿಗೆ ತಂದು ನಿಲ್ಲಿಸಿದೆ ಎಂದು ಕಾಂಗ್ರೆಸ್ ವಿರುದ್ಧ ಪಿ ರಾಜೀವ್ ಹರಿಹಾಯ್ದರು.
ಇದನ್ನೂ ಓದಿ: ಮಹಾರಾಷ್ಟ್ರದ ಸಣ್ಣ ಹಳ್ಳಿಯೂ ಕರ್ನಾಟಕಕ್ಕೆ ಸೇರಲು ಬಿಡಲ್ಲ: ದೇವೇಂದ್ರ ಫಡ್ನವೀಸ್