ಬೆಳಗಾವಿ: ನಗರದ ಬಿಮ್ಸ್ ಆಸ್ಪತ್ರೆಯಲ್ಲಿ ಸೋಂಕಿತ ವೃದ್ಧ ನರಳಾಡಿ ಸಾವನ್ನಪ್ಪಿದ ಪ್ರಕರಣದ ಬಗ್ಗೆ ಈಗಾಗಲೇ ತನಿಖೆಗೆ ಆದೇಶ ನೀಡಲಾಗಿದೆ ಎಂದು ಡಿಸಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.
ನಗರದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವೃದ್ಧ ನರಳಾಡಿ ಸಾವನ್ನಪ್ಪಿದ ವಿಡಿಯೋ ಬಗ್ಗೆ ತಮ್ಮ ಗಮನಕ್ಕೂ ಬಂದಿದೆ. ಈ ಬಗ್ಗೆ ತನಿಖೆ ನಡೆಸುವಂತೆ ಬಿಮ್ಸ್ ನಿರ್ದೇಶಕರಿಗೆ ಆದೇಶಿಸಿದ್ದೇನೆ ಎಂದರು.
ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರು ಉಸಿರಾಟದ ತೊಂದರೆ ಇರುವ ರೋಗಿಗಳನ್ನು ನೇರವಾಗಿ ಬಿಮ್ಸ್ ಆಸ್ಪತ್ರೆಗೆ ಕಳುಹಿಸಬೇಕು. ಸೀವಿಯರ್ ಸಿಂಪ್ಟಮೆಟಿಕ್ ರೋಗಿಗಳು ಬಂದ್ರನೂ ನೇರವಾಗಿ ಬಿಮ್ಸ್‌ಗೆ ಕಳಿಸಬೇಕು. ಟ್ರಯಲ್ ಆ್ಯಂಡ್ ಎರರ್ ಮಾಡಿಕೊಂಡು ನಾಲ್ಕು ದಿನ ಆಸ್ಪತ್ರೆಯಲ್ಲಿಟ್ಟುಕೊಂಡು ಬಳಿಕ ಇಲ್ಲಿ ಕಳಿಸೋದರಿಂದ ಸಾವು ಸಂಭವಿಸಲಿದೆ. ಹೀಗಾಗಿ ಯಾವ ಖಾಸಗಿ ಆಸ್ಪತ್ರೆಗಳು ಈ ರೀತಿ ಮಾಡಬಾರದು ಎಂದು ಖಾಸಗಿ ಆಸ್ಪತ್ರೆಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಅಥಣಿ ತಾಲೂಕಿನ ರಡ್ಡೇರಟ್ಟಿ ಗ್ರಾಮದ 65 ವರ್ಷದ ವೃದ್ಧ ಬಿಮ್ಸ್ ಆಸ್ಪತ್ರೆಯಲ್ಲಿ ಬೆತ್ತಲಾಗಿ ನೆಲದ ಮೇಲೆ ಬಿದ್ದು ನರಳಾಡಿದ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿತ್ತು. ಇದಾದ ಬಳಿಕ ಚಿಕಿತ್ಸೆ ಫಲಿಸದೇ ಜುಲೈ 17ರಂದು ವೃದ್ಧ ಸಾವನ್ನಪ್ಪಿದ್ದರು.