ಬೆಳಗಾವಿ: ಒಂದೂವರೆ ಶತಮಾನಗಳಷ್ಟು ಇತಿಹಾಸ ಹೊಂದಿರುವ ಸರ್ಕಾರಿ ಶಾಲೆಗೆ ಹಳೇ ವಿದ್ಯಾರ್ಥಿಗಳು ಹೊಸ ಮೆರಗು ನೀಡಿದ್ದಾರೆ. ಅಕ್ಷರ ಹೇಳಿಕೊಟ್ಟು ಜೀವನ ರೂಪಿಸಲು ಸಹಾಯಕವಾದ ಶಾಲೆಗೆ ಕೋಟೆ ಮೆರಗು ನೀಡಿದ್ದಾರೆ.
ಜಿಲ್ಲೆಯ ಕಿತ್ತೂರು ಪಟ್ಟಣದ ಸೋಮವಾರಪೇಟೆಯಲ್ಲಿರುವ ಮಾದರಿ ಸರ್ಕಾರಿ ಶಾಲೆಗೆ ಒಂದೂವರೆ ಶತಮಾನದ ಇತಿಹಾಸವಿದೆ. ಇಲ್ಲಿ ಓದಿದ ವಿದ್ಯಾರ್ಥಿಗಳು ಸಮಾಜದ ಹಲವಾರು ಕ್ಷೇತ್ರಗಳಲ್ಲಿ ಉನ್ನತ ಹುದ್ದೆ ಅಲಂಕರಿಸಿ, ಊರಿಗೆ ಮತ್ತು ಶಾಲೆಗೆ ಕೀರ್ತಿ ತಂದಿದ್ದಾರೆ. ಇಂತಹ ಹಿನ್ನೆಲೆಯಿರುವ ಈ ಶಾಲೆಯ ಕಟ್ಟಡಕ್ಕೆ ಎರಡು ದಶಕದ ಹಿಂದೆ ಬಣ್ಣ ಬಳಿಯಲಾಗಿತ್ತು. ಮಳೆ, ಬಿಸಿಲಿನ ಹೊಡೆತಕ್ಕೆ ಸಿಕ್ಕಿದ್ದರಿಂದ ಬಣ್ಣವೆಲ್ಲ ಮಾಸಿ ಹೋಗಿತ್ತು.
ಶಾಲೆಯನ್ನು ಪುನಃ ಅಂದಗೊಳಿಸಲು ಶಾಲೆಯ ಶಿಕ್ಷಕರು ಹಳೇ ವಿದ್ಯಾರ್ಥಿಗಳನ್ನು ಸಂಪರ್ಕಿಸಿದ್ದು, ಅದಕ್ಕೆ ವಿದ್ಯಾರ್ಥಿಗಳಿಂದಲೂ ಸಕಾರಾತ್ಮಕ ಸ್ಪಂದನೆ ಸಿಕ್ಕಿತ್ತು. ವಾಟ್ಸಪ್ ಗ್ರೂಪ್ ಮಾಡಿ ಹಳೆ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದಾರೆ. ಎಲ್ಲರೂ ಅಲ್ಪ-ಸ್ವಲ್ಪ ಸಹಾಯ ಮಾಡಿ 3 ಲಕ್ಷ ರೂ. ಹಣ ಸೇರಿಸಿ ಶಾಲೆಗೆ ನೀಡಲಾಗಿತ್ತು. ಇದಕ್ಕೆ ಸಾಮಾನ್ಯ ರೀತಿಯ ಬಣ್ಣ ಬಳಿಯದೆ ಕೋಟೆ ಮಾದರಿಯಲ್ಲೇ ಬಣ್ಣ ಹಚ್ಚುವ ವಿಚಾರ ಮೊಳಕೆ ಒಡೆದಾಗ ಶಿಕ್ಷಕ ಬಳಗದವರು ಸಹಕಾರ ನೀಡಿದರು.
ಓದಿ: ಬಿಬಿಎಂಪಿ ನೂತನ ಕಾಯ್ದೆ ಸೋಮವಾರದಿಂದಲೇ ಜಾರಿ: ಸದ್ಯದಲ್ಲೇ ಬಿಬಿಎಂಪಿ ವಾರ್ಡ್ ವಿಸ್ತರಣೆ
ಕಲಾವಿದ ಕಿರಣ ಬಾಳೇಕುಂದರಗಿ ಸಂಪರ್ಕಿಸಿ ಶಾಲೆಗೆ ಕೋಟೆ ಮೇರಗು ನೀಡಲಾಗಿದೆ. ಗೋಡೆಯ ಮೇಲೆ ರಾಣಿ ಚೆನ್ನಮ್ಮ ಮತ್ತು ಆಕೆಯ ಬಲಗೈ ಬಂಟ ಸಂಗೊಳ್ಳಿ ರಾಯಣ್ಣ ಭಾವಚಿತ್ರ ರಚಿಸಲಾಗುತ್ತಿದೆ. ಇದೀಗ ಈ ಶಾಲೆ ಎಲ್ಲರನ್ನೂ ಆಕರ್ಷಿಸುತ್ತಿದೆ. ಈ ನೂತನ ಶಾಲಾ ಕಟ್ಟಡವನ್ನು ಶಾಸಕ ಮಹಾಂತೇಶ ದೊಡ್ಡನಗೌಡರ ಉದ್ಘಾಟಿಸಿ, ಹಳೆಯ ವಿದ್ಯಾರ್ಥಿಗಳ ಕಾರ್ಯಕ್ಕೆ ಶಾಸಕರು, ಸ್ಥಳೀಯ ಮುಖಂಡರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.