ಚಿಕ್ಕೋಡಿ: ಕ್ವಾರಂಟೈನಲ್ಲಿ ಇದ್ದ ವ್ಯಕ್ತಿಯ ತಾಯಿ ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ನಡೆದಿದೆ.
ಹುಕ್ಕೇರಿ ಪಟ್ಟಣದ ಲಾಡ್ಜ್ ಒಂದರಲ್ಲಿ ಕ್ವಾರಂಟೈನ್ಗೆ ಒಳಗಾಗಿದ್ದ ವ್ಯಕ್ತಿಯ ತಾಯಿ ಮೃತಪಟ್ಟಿದ್ದಾರೆ. ರಾಜಸ್ಥಾನದ ಅಜ್ಮೇರನಿಂದ ಬಂದ ಜನರೊಂದಿಗೆ ಪ್ರಾಥಮಿಕ ಸಂಪರ್ಕ ಹೊಂದಿದ್ದ ಕಾರಣಕ್ಕೆ ವ್ಯಕ್ತಿಯನ್ನು ಲಾಡ್ಜ್ನಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಅಲ್ಲದೆ, ಈತನ ತಾಯಿ ಸೇರಿದಂತೆ ಮನೆಯವರನ್ನು ಕೂಡ ಹೋಮ್ ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ಇದೀಗ ಹೋಮ್ ಕ್ವಾರಂಟೈನ್ನಲ್ಲಿದ್ದ 75 ವರ್ಷದ ತಾಯಿ ಸಾವನ್ನಪ್ಪಿದ್ದಾರೆ.
ಈಗಾಗಲೇ ಸರ್ಕಾರದ ಮಾರ್ಗಸೂಚಿಯ ಪ್ರಕಾರ ಪುರಸಭೆಯಿಂದ ಅಂತ್ಯಕ್ರಿಯೆಗೆ ತಯಾರಿ ನಡೆದಿದೆ. ಇಂದು ಅಥವಾ ನಾಳೆ ಕ್ವಾರಂಟೈನಲ್ಲಿರುವ ವ್ಯಕ್ತಿಯ ಟೆಸ್ಟ್ ರಿಪೋರ್ಟ್ ಬರುವ ಸಾಧ್ಯತೆಯಿದೆ. ವೃದ್ಧೆ ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ವೃದ್ಧೆಯ ಸಾವಿನಿಂದ ಪಟ್ಟಣದ ಜನರಲ್ಲಿ ಆತಂಕ ಮನೆಮಾಡಿದೆ.