ಬೆಳಗಾವಿ : ವಾಯವ್ಯ ಶಿಕ್ಷಕ, ಪದವೀಧರ ಕ್ಷೇತ್ರದ ಚುನಾವಣೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಅಭ್ಯರ್ಥಿಗಳಾದ ಪ್ರಕಾಶ ಹುಕ್ಕೇರಿ, ಸುನೀಲ್ ಸಂಕ್ ನಾಮಪತ್ರ ಸಲ್ಲಿಸಿದರು. ಡಿಕೆಶಿ ಎರಡು ಗಂಟೆ ತಡವಾಗಿ ಬೆಳಗಾವಿಗೆ ಆಗಮಿಸಿದ ಕಾರಣಕ್ಕೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಕೈ ನಾಯಕರು ಬಳಿಕ ಜಿಲ್ಲಾಧಿಕಾರಿ ನಿತೇಶ ಪಾಟೀಲ್‌ಗೆ ನಾಮಪತ್ರ ಸಲ್ಲಿಸಿದರು.
ಅಭ್ಯರ್ಥಿಗಳಿಗೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಈಶ್ವರ ಖಂಡ್ರೆ, ಸತೀಶ್ ಜಾರಕಿಹೊಳಿ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ, ಶಾಸಕರಾದ ಲಕ್ಷ್ಮಿ ಹೆಬ್ಬಾಳ್ಕರ್, ಗಣೇಶ ಹುಕ್ಕೇರಿ, ಮಾಜಿ ಸಚಿವ ವಿನಯ್ ಕುಲಕರ್ಣಿ, ಪರಿಷತ್ ಸದಸ್ಯ ಚನ್ನರಾಜ್ ಹಟ್ಟಿ ಸಾಥ್ ನೀಡಿದರು. ನಾಮಪತ್ರ ಸಲ್ಲಿಕೆ ಬಳಿಕ ಮರಾಠಾ ಮಂದಿರಕ್ಕೆ ತೆರಳಿದ ಕೈ ನಾಯಕರು ಸಮಾವೇಶದಲ್ಲಿ ಭಾಗವಹಿಸಿದರು.
ಬಿಜೆಪಿ ದುರಾಡಳಿತದ ಬಗ್ಗೆ ಜನರಿಗೆ ಸಿಟ್ಟಿದೆ : ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಈ ಸರ್ಕಾರದಿಂದ ಶಿಕ್ಷಕರು, ನಿರುದ್ಯೋಗಿಗಳಿಗೆ ಅನ್ಯಾಯ ಆಗ್ತಿದೆ. ಈ ಚುನಾವಣೆಯಲ್ಲಿ ಪ್ರಬುದ್ಧ ಮತದಾರರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ನಾವು ಸಮೀಕ್ಷೆ ಮಾಡಿಯೇ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ಅನೇಕ ಸಂಸ್ಥೆ ಮುಖ್ಯಸ್ಥರ ಜೊತೆಗೆ ನಾವು ಸಂಪರ್ಕದಲ್ಲಿದ್ದೇವೆ.
ಅವರೆಲ್ಲ ನಮ್ಮ ಅಭ್ಯರ್ಥಿಗಳಿಗೆ ಆಶೀರ್ವದಿಸುವ ಭರವಸೆ ನೀಡಿದ್ದಾರೆ. ವಿದ್ಯಾವಂತ ಮತದಾರರ ಮೇಲೆ ನಮಗೆ ವಿಶ್ವಾಸವಿದೆ. ರಾಜ್ಯ, ಕೇಂದ್ರ ಸರ್ಕಾರದ ಜನವಿರೋಧಿ ಆಡಳಿತದ ವಿರುದ್ಧ ಮತ ಚಲಾಯಿಸುತ್ತಾರೆ. ಪ್ರಕಾಶ್ ಹುಕ್ಕೇರಿ ನಮ್ಮ ನಾಯಕರು, ನೂರಾರು ಜನ ನಾಯಕರನ್ನು ಸೃಷ್ಟಿ ಮಾಡುವ ಶಕ್ತಿ ಅವರಲ್ಲಿದೆ ಎಂದರು.
ಕಾಂಗ್ರೆಸ್ ಅಭ್ಯರ್ಥಿ ಲ್ಯಾಪ್ ಟಾಪ್ ಹಂಚಿಕೆ ಮಾಡ್ತಿದ್ದಾರೆಂಬ ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಲ್ಯಾಪ್ ಟಾಪ್ ಕೊಡುತ್ತಾರೋ? ಇನ್ನೊಂದು ಕೊಡ್ತಾರೋ ಅದನೆಲ್ಲ ನಾನು ಚರ್ಚೆ ಮಾಡುವುದಿಲ್ಲ. ನಾವು ಲ್ಯಾಪ್ ಟಾಪ್ ಕೊಡಲ್ಲ. ಮತದಾರರ ಹೃದಯ ಗೆದ್ದು ಕೈಮುಗಿದು ಮತವನ್ನು ಕೇಳುತ್ತಿದ್ದೇವೆ ಎಂದರು.
ಬಿಜೆಪಿಯವರಿಗೆ ಬಡವರ, ನಿರುದ್ಯೋಗ ಸಮಸ್ಯೆ ಬಗ್ಗೆ ಯೋಚನೆ ಮಾಡುತ್ತಿಲ್ಲ. ಚಿಕ್ಕ ಮಕ್ಕಳಿಗೆ ಕೋಮು ವಿಷ ಬೀಜವನ್ನ ಬಿತ್ತಲು ಹೊರಟ್ಟಿದ್ದಾರೆ. ತಾಂಬೂಲ ಪ್ರಶ್ನೆ ಅವರ ವೈಯಕ್ತಿಕ ವಿಚಾರ. ಸರ್ಕಾರ ಇಂತಹದ್ದಕ್ಕೆ ಅವಕಾಶ ನೀಡಬಾರದು. ಪಠ್ಯಪುಸ್ತಕ ಪರಿಷ್ಕರಣೆ ವಿಚಾರವನ್ನು ಸಾರ್ವಜನಿಕ ಚರ್ಚೆಗೆ ಬಿಡಬಾರದಾಗಿತ್ತು.
ಬರಗೂರು ರಾಮಚಂದ್ರಪ್ಪ ಈಗ ಅದರ ಜವಾಬ್ದಾರಿಯನ್ನ ತೆಗೆದುಕೊಂಡಿದ್ದಾರೆ. ಈ ಮೊದಲು ಸರ್ಕಾರ ಭಗತ್ ಸಿಂಗ್ ಅವರ ಹೆಸರು ಬಿಡುವುದು, ವಾಪಸ್ ಪಡೆಯುವುದನ್ನು ಮಾಡಿತ್ತು. ಈಗ ನಾರಾಯಣ್ ಗುರು ಹೆಸರನ್ನು ಈಚೆಗೆ ಬಿಡುವುದು, ತೆಗೆದುಕೊಳ್ಳುವುದನ್ನು ಮಾಡ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶಿಕ್ಷಕರ, ಪದವೀಧರ ಕ್ಷೇತ್ರದ ಅಭಿವೃದ್ದಿ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ: ಮರಾಠಾ ಭವನದಲ್ಲಿನ ಕಾಂಗ್ರೆಸ್ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿವ ಡಿಕೆಶಿ, ಧಾರವಾಡ, ಹಾಸನ, ಮಂಡ್ಯ ಹಾಗೂ ಮೈಸೂರು ಜಿಲ್ಲೆಯಲ್ಲಿ ಅವರ ಪಕ್ಷದ ನಾಯಕರು ಆಯ್ಕೆಯಾಗುವುದಿಲ್ಲ ಎಂಬ ಆತಂಕದಿಂದಲೇ ಹೊಸಮುಖಗಳಿಗೆ ಅವಕಾಶ ನೀಡಿದ್ದಾರೆ. ಹೀಗಾಗಿ ಹೊರಟ್ಟಿಯವರನ್ನು ಬಿಜೆಪಿಗೆ ಸೇರ್ಪಡೆ ಮಾಡಿಕೊಂಡಿದ್ದಾರೆ ಎಂದು ಬಿಜೆಪಿ ನಾಯಕರ ಕಾಲೆಳೆದರು.
ಶಿಕ್ಷಣ ಕ್ಷೇತ್ರಕ್ಕೆ ʻಕೈʼ ಕೊಡುಗೆ ಅಪಾರ: ಶಿಕ್ಷಣ ಕ್ಷೇತ್ರ ಬಹಳಷ್ಟು ಬದಲಾವಣೆಯಾಗಬೇಕಾಗಿದೆ. ಶಿಕ್ಷಕರ ಕ್ಷೇತ್ರಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆಗಳನ್ನು ತಿಳಿಸುವ ಮೂಲಕ, ಕಾರ್ಯಕರ್ತರು ತಮ್ಮ ತಮ್ಮ ಕ್ಷೇತ್ರದಲ್ಲಿ ಪ್ರಚಾರ ನಡೆಸಬೇಕು ಎಂದರು.
ರಾಜ್ಯದಲ್ಲಿ ಭ್ರಷ್ಟಾಚಾರ ನೆಲೆಯೂರಿದೆ: ಸರ್ಕಾರಿ ಹುದ್ದೆ, ಅಭಿವೃದ್ಧಿ ಕೆಲಸಕ್ಕಾಗಿ ಕಮಿಷನ್ ನೀಡಬೇಕಾಗಿದೆ. ಸದ್ಯ ಬಿಜೆಪಿ ಆಡಳಿತದಲ್ಲಿ ಹಣಕ್ಕಾಗಿ ಎಲ್ಲವೂ ನಡೆಯುತ್ತಿದೆ. ಪಿಎಸ್ಐ ನೇಮಕಾತಿಯಿಂದ ಹಿಡಿದು ಎಲ್ಲವೂ ಹಣದ ಹೊಳೆ ಹರಿಯುತ್ತಿದೆ. ಇದು ಭ್ರಷ್ಟಾಚಾರದಿಂದ ಸಾಧ್ಯವಾಗುತ್ತಿದೆ ಸರ್ಕಾರ ವಿರುದ್ದ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಶಾಸಕ ಸತೀಶ ಜಾರಕಿಹೊಳಿ ಅವರು ಮಾತನಾಡಿ, ಕೇವಲ ಅಭ್ಯರ್ಥಿಗಳು ಮಾತ್ರ ಚುನಾವಣೆಯಲ್ಲಿದ್ದಾರೆ ಎಂದು ಭಾವಿಸದೇ ಎಲ್ಲರೂ ಸಕ್ರೀಯರಾಗಿ ಕೆಲಸಮಾಡಬೇಕು. ಇನ್ನೂ ಕಾಲಾವಕಾಶವಿದೆ ಶಿಕ್ಷಣ ಕ್ಷೇತ್ರ ಬದಲಾವಣೆ ಹಂತ ನಮ್ಮಿಂದಲೇ ಆರಂಭವಾಗಲಿ ಎಂದರು.
ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಮಾತನಾಡಿ, ಎರಡು ಮತಕ್ಷೇತ್ರಗಳಲ್ಲಿ ಮೂರು ಜಿಲ್ಲೆಗಳಿವೆ. ಹಿರಿಯರು ಮತ್ತು ಯುವಕರಿಗೆ ತಲಾ ಒಂದು ಟಿಕೆಟ್ ನೀಡಲಾಗಿದೆ. ಇಬ್ಬರನ್ನೂ ಗೆಲ್ಲಿಸಿಕೊಡುವ ಹೊಣೆ ಕಾಂಗ್ರೆಸ್ ಕಾರ್ಯಕರ್ತರದ್ದಾಗಿದೆ. ಬಿಜೆಪಿ ಟೀಕೆಸದೇ ಶಿಕ್ಷಕರ ಹಾಗೂ ಪದವೀಧರ ಕ್ಷೇತ್ರಕ್ಕೆ ಕಾಂಗ್ರೆಸ್ ನೀಡಿರುವ ಕೊಡುಗೆಯನ್ನು ಮೂಟ್ಟಿಸಿದರೆ ಸಾಕು, ಗೆಲುವು ನಮ್ಮದೇ ಎಂದರು.
ಇದನ್ನೂ ಓದಿ: ವಿಧಾನಪರಿಷತ್ ಚುನಾವಣೆ : ಎಲ್ಲಾ ಏಳು ನಾಮಪತ್ರಗಳು ಕ್ರಮಬದ್ಧ, ಅಧಿಕೃತ ಘೋಷಣೆ ಬಾಕಿ