ಬೆಳಗಾವಿ: ಧಾರವಾಡ ಜಿಲ್ಲಾ ಪಂಚಾಯತ್ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಬಂಧನವಾಗಿರುವುದರಲ್ಲಿ ರಾಜಕೀಯವಿಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಇದ್ದಾಗ, ವಿನಯ್ ಕುಲಕರ್ಣಿ ಮಂತ್ರಿ ಆಗಿದ್ದರು, ಆಗ ಯೋಗೇಶಗೌಡ ಕೊಲೆ ನಡೆದಿತ್ತು. ಪ್ರಕರಣದಲ್ಲಿ ವಿನಯ್ ಕುಲಕರ್ಣಿ ತಮ್ಮ ಪ್ರಭಾವ ಹೊಂದಿದ್ದರು. ಯೋಗೇಶಗೌಡ ಹತ್ಯೆ ಪ್ರಕರಣವನ್ನು ಸಿಬಿಐಗೆ ನೀಡುವಂತೆ ಸಂಬಂಧಿಕರು, ಸ್ಥಳೀಯರು ಒತ್ತಾಯಿಸಿದ್ದರೂ ಸಿಬಿಐಗೆ ಕೊಡಲು ಸಿದ್ದರಾಮಯ್ಯ ಸರ್ಕಾರ ಹಿಂದೇಟು ಹಾಕಿತ್ತು. ನಮ್ಮ ಸರ್ಕಾರ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಈಗ ಪ್ರಕರಣದಲ್ಲಿ ಸಿಬಿಐ ವಿನಯ್ ಕುಲಕರ್ಣಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ ಎಂದರು.
ಇನ್ನೂ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿ ಕಾರಿರುವ ಸವದಿ, ಬಿಜೆಪಿ ವಿರುದ್ಧ ಸುಳ್ಳು ಹೇಳಿಕೆ ಹಾಗೂ ಅನಾವಶ್ಯಕ ಆರೋಪ ಮಾಡುತ್ತಿರುವ ಕಾಂಗ್ರೆಸ್ ನಾಯಕರಿಗೆ ಜಾಗತಿಕ ಮಟ್ಟದ ಅತ್ಯುತ್ತಮ ಪ್ರಶಸ್ತಿ ಕೊಡಬೇಕು. ಅತಿವೃಷ್ಟಿಗೆ, ಅನಾವೃಷ್ಟಿಗೆ ಬಿಜೆಪಿನೇ ಕಾರಣ. ಮಳೆ ಬಂದರೂ ಬರದಿದ್ದರೂ ಬಿಜೆಪಿ ಕಾರಣ. ನದಿ ಬಂದರೂ, ಬರದಿದ್ದರೂ ಹಾಗೂ ಗಾಳಿ ಬಿಟ್ಟರೆ, ಬಿಡದಿದ್ದರೆ ಬಿಜೆಪಿಯೇ ಕಾರಣ ಎಂದು ಕಾಂಗ್ರೆಸ್ ನಾಯಕರು ಆರೋಪಿಸುತ್ತಾರೆ. ಸುಳ್ಳು ಹೇಳುವುದನ್ನು ಕಾಂಗ್ರೆಸ್ ನಾಯಕರು ಮೈಗೂಡಿಸಿಕೊಂಡಂತೆ ಕಾಣುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.